ಭೋಪಾಲ: ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ನ್ಯಾಷನಲ್ ಪಾರ್ಕ್‌ಗೆ ತರಲಾಗಿದ್ದ ಎಂಟು ಚೀತಾಗಳ ಪೈಕಿ ‘ಸಾಶಾ ‘ ಜನವರಿಯಲ್ಲಿ ಮೂತ್ರಪಿಂಡ ಸೋಂಕಿಗೆ ತುತ್ತಾಗಿ ಬಳಲುತಿದ್ದದ್ದು ಸೋಮವಾರ ಕೊನೆಯುಸಿರೆಳೆದಿದೆ.
ಭಾರತದಲ್ಲಿ 70 ವರ್ಷಗಳ ಹಿಂದೆಯೇ ಅಸ್ತಿತ್ವವನ್ನು ಕಳೆದುಕೊಂಡಿದ್ದ ಚೀತಾಗಳನ್ನು ಮರುಪರಿಚಯಿಸುವ ಮಹತ್ವಾಕಾಂಕ್ಷೆಯ ಭಾಗವಾಗಿ ಕಳೆದ ವರ್ಷ ತರಲಾಗಿದ್ದ ಮೊದಲ ತಂಡದಲ್ಲಿದ್ದ ಸಾಶಾ ಐದು ಹೆಣ್ಣು ಚೀತಾಗಳ ಪೈಕಿ ಒಂದಾಗಿತ್ತು. ಇನ್ನು ಪಾರ್ಕ್‌ನಲ್ಲಿಯ ಇರುವ ಇತರ ಚೀತಾಗಳು ಆರೋಗ್ಯವಾಗಿವೆ ಎಂದು ತಿಳಿದು ಬಂದಿದೆ.
ಕಳೆದ ವರ್ಷದ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರು ಸಾಶಾ ಸೇರಿದಂತೆ ಐದು ವರ್ಷದ ಎರಡು ಚೀತಾಗಳನ್ನು ಕುನೊದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಬಿಡುಗಡೆ ಮಾಡಿದ್ದರು.
ಈ ವರ್ಷದ ಫೆ.17ರಂದು ದಕ್ಷಿಣ ಆಫ್ರಿಕಾದಿಂದ ಏಳು ಗಂಡು ಮತ್ತು ಐದು ಹೆಣ್ಣು ಸೇರಿದಂತೆ ಇನ್ನೂ ಒಂದು ಡಝನ್ ಚೀತಾಗಳನ್ನು ಕುನೊ ಪಾರ್ಕ್ ಗೆ ತರಲಾಗಿದ್ದು, ಅದು ಈಗ ಒಟ್ಟು 20 ಚೀತಾಗಳ ಆವಾಸಸ್ಥಾನವಾಗಿದೆ.