ಮೈಸೂರು: ಇತ್ತೀಚೆಗೆ ನಿಧನರಾದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಧ್ರುವನಾರಾಯಣ್ ಅವರು ಪಕ್ಷ ನಿಷ್ಠೆ, ಅಪರೂಪದ ರಾಜಕಾರಣಿಯಾಗಿದ್ದರು. ಅವರ ಜಾಗವನ್ನು ತುಂಬಲು ಅವರ ಪುತ್ರ ದರ್ಶನ್ ಅವರನ್ನು ಬೆಳೆಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಆಯೋಜಿಸಿದ್ದ ಆರ್.ಧ್ರುವನಾರಾಯಣ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಆರ್.ಧ್ರುವನಾರಾಯಣ್ ನಿಧನರಾಗುವ ಹಿಂದಿನ ದಿನ ನಂಜನಗೂಡಿನಲ್ಲಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.
ಮೈಸೂರು, ಚಾಮರಾಜನಗರದಲ್ಲಿ ಮಹದೇವ ಪ್ರಸಾದ್ ಪಕ್ಷ ಕಟ್ಟುವುದರಲ್ಲಿ ಮುಂಚೂಣಿಯಲ್ಲಿದ್ದರು. ಅವರ ನಂತರ ಪಕ್ಷ ಗಟ್ಟಿಯಾಗಿ ಬೆಳೆಯಲು ಧ್ರುವನಾರಾಯಣ್ ಪಾತ್ರ ದೊಡ್ಡದು. ನನಗೆ ಧ್ರುವನಾರಾಯಣ್ ಸಾವಿನಿಂದ ದೊಡ್ಡ ಶಕ್ತಿ ಕಳೆದುಕೊಂಡಂತೆ ಆಗಿದೆ. ಅವರಿಗೆ ಅವರೇ ಸಾಟಿ. ಅವರ ಜಾಗ ತುಂಬಲು ಮಗ ದರ್ಶನ್ ಅವರನ್ನು ಬೆಳೆಸುತ್ತೇವೆ ಎಂದರು.
ಧ್ರುವನಾರಾಯಣ್ ಅವರ ದೂರದೃಷ್ಟಿ, ಕಾಳಜಿ ಬೆಳೆಸಿಕೊಳ್ಳಬೇಕು. ಜಾತಿ, ಧರ್ಮ, ವರ್ಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು. ಎಚ್.ಡಿ.ಕೋಟೆ ಅಂದರೆ ಅವರಿಗೆ ಬಹಳ ಪ್ರೀತಿ. ಅನಿಲ್ ಚಿಕ್ಕಮಾದು ಅವರನ್ನು ಅಭ್ಯರ್ಥಿಯಾಗಿ ಗುರುತಿಸಿದವರು ಧ್ರುವನಾರಾಯಣ್.
ನಾನು ಸಿಎಂ ಆಗಿದ್ದಾಗ ಚಿಕ್ಕಮಾದು ಶಾಸಕರಾಗಿದ್ದರು. ಪ್ರತಿಪಕ್ಷ ನಾಯಕ ಆಗಿರುವಾಗ ಪುತ್ರ ಅನಿಲ್ ಶಾಸಕ ಆಗಿದ್ದಾರೆ. ಇಬ್ಬರನ್ನೂ ಗೆಲ್ಲಿಸಿಕೊಳ್ಳಲು ನಾನು ಎಲ್ಲ ಪ್ರಯತ್ನ ಮಾಡುತ್ತೇನೆ. ಧ್ರುವನಾರಾಯಣ ನಂಜನಗೂಡಿಗೆ ಆಕಾಂಕ್ಷಿಯಾಗಿದ್ದರು. ಅವರ ನಿಧನದ ಬಳಿಕ ನಾನು ದರ್ಶನ್ ಜತೆ ಫೋನ್‌ನಲ್ಲಿ ಮಾತನಾಡಿದೆ. ನೋವಿನಲ್ಲೂ ಅಭ್ಯರ್ಥಿಯಾಗಲು ದರ್ಶನ್ ಒಪ್ಪಿದರು. ಅವರನ್ನು ಗೆಲ್ಲಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ದರ್ಶನ್ ಧ್ರುವನಾರಾಯಣ್ ಮಾತನಾಡಿ, ನಮ್ಮ ತಂದೆ ನಮ್ಮೊಂದಿಗೆ ದೈಹಿಕವಾಗಿ ಇಲ್ಲ. ಆದರೆ ಮಾನಸಿಕವಾಗಿ ಇದ್ದಾರೆ. ನಮ್ಮ ತಂದೆಯವರ ಅಂತಿಮ ಕಾರ್ಯಕ್ಕೆ ರಾಜ್ಯಾದ್ಯಂತ ಜನ ಬಂದರು. ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಸಿದ್ದರಾಮಯ್ಯ, ಜಾರಕಿಹೊಳಿ ಸೇರಿದಂತೆ ಎಲ್ಲರಿಗೂ ನಾನು ಧನ್ಯವಾದ, ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.