ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೌಕರರಿಗೆ ಅಧಿಕಾರಿಗಳು ಕೊಡುತ್ತಿರುವ ಕಿರುಕುಳ ನಿರಂತರವಾಗಿದ್ದು, ಇದು ನಿಲ್ಲುವ ಯಾವುದೇ ಸೂಚನೆ ಕಾಣಿಸುತ್ತಿಲ್ಲ.
ತನ್ನ ಮಗಳ ಕಾಲೇಜು ಫೀಸ್ ಕಟ್ಟಲು ಹಣವಿಟ್ಟುಕೊಂಡು ಡ್ಯೂಟಿಗೆ ಬಂದ ಚಾಲಕನ ಹಣವನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಹೀಗಾಗಿ ಇದರಿಂದ ನೊಂದ ಚಾಲಕ ನ್ಯಾಯ ನೀಡುವಂತೆ ಹೈಕೋರ್ಟ್ ಮೊರೆ ಹೋಗಲು ವಕೀಲರನ್ನು ಸಂಪರ್ಕಿಸಿದ್ದಾರೆ.
ಸಾರಿಗೆ ನೌಕರರಿಗೆ ಅಧಿಕಾರಿಗಳ ಕಿರುಕುಳ ನಿತ್ಯ ಇದ್ದು, ಇದರಿಂದ ಮನನೊಂದ ನೂರಾರು ನೌಕರರು ಆತ್ಮಹತ್ಯೆ ಮಾಡಿಕೊಂಡಿರುವ ನಿದರ್ಶನ ನಮ್ಮ ಕಣ್ಣಮುಂದೆಯೇ ಇದೆ. ಆದರೂ ತಮ್ಮ ಚಾಳಿಯನ್ನು ಬಿಡದ ಅಧಿಕಾರಿಗಳು ನೌಕರರನ್ನು ಒಂದು ರೀತಿ ಶತ್ರುಗಳಂತೆ ಕಾಣುತ್ತಿದ್ದು, ಕಿರುಕುಳ ಕೊಡುವುದನ್ನು ಮುಂದುವರಿಸುತ್ತಲೇ ಇದ್ದಾರೆ. ಇದಕ್ಕೆ ಅಂತ್ಯ ಹಾಡಬೇಕು ಎಂಬ ನಿಟ್ಟಿನಲ್ಲಿ ಸಂಘಟನೆಗಳು ಹಲವಾರು ಪ್ರತಿಭಟನೆಗಳನ್ನು ಮಾಡಿ ಸರ್ಕಾರ ಮತ್ತು ಆಡಳಿತ ಮಂಡಳಿಯ ಗಮನವನ್ನು ಸೆಳೆದಿವೆ.ಆದರೂ ಏನು ಪ್ರಯೋಜನವಾಗಿಲ್ಲ.
ಸಚಿವರು, ಮೇಲಧಿಕಾರಿಗಳು ಇನ್ನು ಮುಂದೆ ಕಿರುಕುಳವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೂ ಆ ಭರವಸೆಯಂತೆ ನಡೆದುಕೊಂಡಿಲ್ಲ. ಇದರಿಂದ ಬಿಎಂಟಿಸಿಯಲ್ಲಿ ಅಧಿಕಾರಿಗಳ ಕಿರುಕುಳ ತಪ್ಪುತ್ತಿಲ್ಲ ಎನ್ನುವುದಕ್ಕೆ ಈ ಪ್ರಕರಣ ತಾಜಾ ನಿದರ್ಶನವಾಗಿದೆ.
ಘಟನೆ ವಿವರ: ಬಿಎಂಟಿಸಿ ಚಾಲಕ ಲೋಕೇಶ್ ಎಂಬುವರು ಮಗಳ ಕಾಲೇಜು ಫೀಸ್ ಕಟ್ಟಲು ತನ್ನ ಸ್ನೇಹಿತರೊಬ್ಬರಿಂದ ಹಣವನ್ನು ಸಾಲವಾಗಿ ತೆಗೆದುಕೊಂಡು ಹಾಗೆಯೇ ಜೇಬಲ್ಲಿ ಇಟ್ಟುಕೊಂಡು ಡ್ಯೂಟಿಗೆ ಬಂದಿದ್ದರು. ಆದರೆ, ಈ ಹಣ ಅಕ್ರಮ ಎಂದು ನೋಟಿಸ್ ನೀಡಿದ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಚಾಲಕನಿಗೆ ಕಾರಣ ಕೇಳಿ ಆಪಾದನಾ ಪತ್ರವನ್ನು ನೀಡಿದ್ದಾರೆ. ಇದರಿಂದ ಇತ್ತ ಮಗಳಿಗೆ ಕಾಲೇಜು ಶುಲ್ಕ ಭರಿಸಲು ಪಡೆದಿದ್ದ ಸಾಲದ ಹಣವು ಇಲ್ಲ, ಅತ್ತ ಮಾಡಲು ಕೆಲಸವೂ ಇಲ್ಲವಾಗುತ್ತದೆ ಎಂದು ಕಂಗಾಲಾಗಿದ್ದಾರೆ.
ಕಳೆದ ಶನಿವಾರ (ಮಾ.25) ಮಧ್ಯಾಹ್ನ 3.30ರ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ನಲ್ಲಿ ಪ್ರಯಾಣಿಕರ ಟಿಕೆಟ್ ತನಿಖೆಗೆ ಬಂದ ತನಿಖಾಧಿಕಾರಿಗಳು ಚಾಲಕನ ಬಳಿ ಇದ್ದ 50 ಸಾವಿರ ರೂಪಾಯಿಯನ್ನು ವಶಕ್ಕೆ ಪಡೆದುಕೊಂಡರು.
ಬಿಎಂಟಿಸಿ ಚಾಲಕ ಲೋಕೇಶ್ ಅವರ ಮಗಳು ಚಾಮರಾಜಪೇಟೆಯ ಆದರ್ಶ ಸಮೂಹ ಸಂಸ್ಥೆಯಲ್ಲಿ ಬಿಬಿಎಂ ಮೂರನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ. ಈಕೆಯ ಕಾಲೇಜು ಶುಲ್ಕ ಕಟ್ಟಲು ಲೋಕೇಶ್ ತಮ್ಮ ಜೇಬಿನಲ್ಲಿ ಐವತ್ತು ಸಾವಿರ ರೂಪಾಯಿ ಇಟ್ಟುಕೊಂಡಿದ್ದರು. ಕೆಂಗೇರಿ ಟೂ ಎಲೆಕ್ಟ್ರಾನಿಕ್ ಸಿಟಿ ಮಾರ್ಗ 378/ 30 ಬಸ್ ಡ್ರೈವಿಂಗ್ ಮಾಡುತ್ತಿದ್ದ ಲೋಕೇಶ್ ಎಲೆಕ್ಟ್ರಾನಿಕ್ ಸಿಟಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಅಧಿಕಾರಿಗಳು ಜೇಬು ಚೆಕ್ ಮಾಡಿ ಹಣ ಸೀಜ್ ಮಾಡಿದ್ದಾರೆ.
ಎಟಿಐ ವಿದ್ಯಾರಾಣಿ ಮತ್ತು ವೆಂಕಟೇಶ್ ಎಂಬ ಅಧಿಕಾರಿಗಳು ಲೋಕೇಶ್ ಅವರ ಹಣ ವಶಕ್ಕೆ ಪಡೆದಿದ್ದಾರೆ. ಸದ್ಯ ನೊಂದ ಬಸ್ ಚಾಲಕ ಸುಪ್ರೀಂ ಹಾಗೂ ಹೈಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ಅವರ ಮೂಲಕ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಹಾಕಲು ಮುಂದಾಗಿದ್ದಾರೆ.
ಶುಕ್ರವಾರ ಡ್ಯೂಟಿಗೆ ಬಂದ ಚಾಲಕ ಲೋಕೇಶ್ ಅವರಿಗೆ ಸಿಸಿ (ಒಪ್ಪಂದದ ಮೇರೆಗೆ ಬಸ್ ಕಳುಹಿಸಿದ್ದಾರೆ) ಡ್ಯೂಟಿ ನೀಡಿದ್ದಾರೆ. ಬಳಿಕ ಶನಿವಾರ ಮತ್ತೆ ಅವರನ್ನು ಮಾರ್ಗದ ಮೇಲೆ ಕರ್ತವ್ಯಕ್ಕೆ ಕಳುಹಿಸಿದ್ದಾರೆ. ಇದರಿಂದ ಶುಕ್ರವಾರ ತನ್ನ ಸ್ನೇಹಿತನಿಂದ ಪಡೆದಿದ್ದ 50 ಸಾವಿರ ರೂ. ಸಾಲದ ಹಣವನ್ನು ಹಾಗೆಯೇ ಜೇಬಿನಲ್ಲಿ ಇಟ್ಟುಕೊಂಡಿದ್ದರು. ಮಾರನೇ ದಿನ ಅಂದರೆ ಶನಿವಾರ ಮಗಳ ಕಾಲೇಜು ಫೀಸ್ ಕಟ್ಟಬೇಕು ನಾನು ಕಾಲೇಜಿಗೆ ಹೋಗಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಅದನ್ನು ಕೇಳದ ಅಧಿಕಾರಿಗಳು ಡ್ಯೂಟಿಗೆ ಹೋಗಲೇ ಬೇಕು ಎಂದು ತಾಕೀತು ಮಾಡಿದ್ದಾರೆ.
ಹೀಗಾಗಿ ವಿಧಿ ಇಲ್ಲದೆ ಡ್ಯೂಟಿಗೆ ಹೋಗಿ ಬಳಿಕ ಕಾಲೇಜು ಶುಲ್ಕ ಕಟ್ಟಬಹುದು ಅಂತ ಲೋಕೇಶ್ ಅಂದುಕೊಂಡಿದ್ದರು. ಇವರ ಬಳಿ ಗೂಗಲ್ ಪೇ, ಫೋನ್ ಪೇ ಇಲ್ಲದ ಹಿನ್ನೆಲೆ ನಗದು ಹಣವನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದರು. ಸದ್ಯ ಈ ಹಣವನ್ನು ಈಗ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ನನಗೆ ನನ್ನ ಹಣ ಕೊಡಿಸಿ ಮಗಳ ಫೀಸ್ ಕಟ್ಟಬೇಕೆಂದು ಚಾಲಕ ಲೋಕೇಶ್ ಅಂಗಲಾಚುತ್ತಿದ್ದಾರೆ.