ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಎ.ಟಿ. ರಾಮಸ್ವಾಮಿ ಹಲವು ದಿನಗಳಿಂದ ಜೆಡಿಎಸ್‌ನಿಂದ ದೂರವಿದ್ದರು. ಪರಿಣಾಮ ಇಂದು ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಮೂಲಕ ಗುಬ್ಬಿ ಶಾಸಕ ಶ್ರೀನಿವಾಸ್ ನಂತರ ಜೆಡಿಎಸ್‌ನ ಇನ್ನೊಂದು ವಿಕೆಟ್ ಪತನವಾಗಿದೆ. ನಿರೀಕ್ಷೆಯಂತೆ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಸಂತೋಷದಿಂದ ನಾನು ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶಾಸಕನಾಗಲು ಅವಕಾಶ ಮಾಡಿಕೊಟ್ಟ ಜೆಡಿಎಸ್‌ಗೆ ಧನ್ಯವಾದ ಹೇಳುತ್ತೇನೆ. ನಾನು ವೈಯಕ್ತಿಕ ಹಿತಾಸಕ್ತಿಯಿಂದ ರಾಜಕೀಯ ಮಾಡಿಲ್ಲ. ನಾನು ಶಾಸಕನಾಗಿದ್ದಾಗ ಉತ್ತಮ ಕೆಲಸಗಳನ್ನು ಮಾಡಿದ್ದೇನೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷವನ್ನು ನಾನು ಬಿಡಲಿಲ್ಲ. ಅವರೇ ಹೊರೆಗೆ ಹಾಕಿದ್ರು. ನಾನು ಯಾವತ್ತು ಬಿಡ್ತೀನಿ ಅಂತ ಹೇಳಿಲ್ಲ. ಎಲ್ಲ ಪಕ್ಷದಲ್ಲಿ ಲೋಪದೋಷ ಇರುತ್ತವೆ. ನಾನು ಬಲಿಪಶುವಾದೆ. ಹಣದ ಮುಂದೆ ಬಲಿಪಶು ಆಗಿದ್ದೇನೆ. ಅಕ್ರಮವನ್ನು ಎತ್ತಿ ಹಿಡಿದಿದ್ದೇ ನನಗೆ ಮಾರಕವಾಗಿದೆ. ಅದನ್ನು ನಾನು ಸಂತೋಷವಾಗಿ ಸ್ವೀಕಾರ ಮಾಡುತ್ತೇನೆ ಎಂದರು.
ವೈಯಕ್ತಿಕ ಲಾಭಕ್ಕೆ ಕೆಲಸ ಮಾಡಿಲ್ಲ. ಜನತೆಯ ಹಿತಾಸಕ್ತಿ ಕಾಪಾಡಿದ ತೃಪ್ತಿ ನನಗೆ ಇದೆ. ತಪ್ಪನ್ನು ತಪ್ಪು, ಸರಿಯನ್ನು ಸರಿ ಅಂತ ಹೇಳಿದ್ದೇನೆ. ವಿರೋಧಗಳು ಕೂಡಾ ನನ್ನ ಭಾವನೆಗೆ ಸಹಕಾರ ಕೊಟ್ಟಿವೆ. ನನ್ನ ಇವತ್ತಿನ ವಿರೋಧಿಗಳು ಉತ್ತಮ ಆಶಯದೊಂದಿಗೆ ಒಳ್ಳೆಯದು ಮಾಡಲಿ ಎಂದರು.
ಮುಂದಿನ ದಿನಗಳಲ್ಲಿ ನನ್ನ ನಡೆ ಬಗ್ಗೆ ಹೇಳುತ್ತೇನೆ. ಅನೇಕ ಜನರು ನನ್ನನ್ನು ಸಂಪರ್ಕ ಮಾಡುತ್ತಿದ್ದಾರೆ. ಕಾಲಾಯ ತಸ್ಮೈ ನಮಃ. ಜನರಿಗಾಗಿ ಮತ್ತೆ ಚುನಾವಣೆಗೆ ನಿಲ್ಲಬೇಕು ಎಂಬ ಅಪೇಕ್ಷೆ ಇದೆ. ಅವಕಾಶ ಸಿಕ್ಕರೆ ನಿಲ್ಲುತ್ತೇನೆ. ಕಾಂಗ್ರೆಸ್ ಸೇರ್ಪಡೆ ಆಗೋ ಚರ್ಚೆ ಆಗಿದೆ. ಆದರೆ ಇನ್ನೂ ನಿರ್ಧಾರ ಆಗಿಲ್ಲ. ಆದಷ್ಟು ಬೇಗ ಮುಂದಿನ ತೀರ್ಮಾನ ತಿಳಿಸುತ್ತೇನೆ ಎಂದರು.