ಮೈಸೂರು: ಉತ್ತಮ ಜನಪ್ರತಿನಿಧಿ ಆಯ್ಕೆಗೆ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ಮೈಸೂರು ಜಿಲ್ಲಾ ಚುನಾವಣಾ ರಾಯಭಾರಿ ಹಾಗೂ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಕರೆ ನೀಡಿದ್ದಾರೆ.
ಇಂದು ಮಾತನಾಡಿದ ಜಾವಗಲ್ ಶ್ರೀನಾಥ್, ಪ್ರಜಾಪ್ರಭುತ್ವ ವ್ಯವಸ್ಥೆ ಆರಂಭವಾಗುವುದೇ ಚುನಾವಣೆ ಮೂಲಕ. ಉತ್ತಮ ಜನಪ್ರತಿನಿಧಿಯ ಆಯ್ಕೆಗಾಗಿ ಪ್ರತಿಯೊಬ್ಬ ಮತದಾರರು ಮತದಾನ ಮಾಡಲು ಮುಂದೆ ಬರಬೇಕು ಎಂದರು.
ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ, ಇದರ ಸದುಪಯೋಗವನ್ನೂ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇನ್ನು ಪ್ರಮುಖವಾಗಿ ನಗರ ಪ್ರದೇಶದ ವಿದ್ಯಾವಂತ ಮತದಾರರು ಚುನಾವಣೆಯ ದಿನ ಮನೆಯಿಂದ ಹೊರಬಂದು ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಇದನ್ನು ಮರೆಯಬಾರದು ನಾವು ಒಳ್ಳೆ ವ್ಯಕ್ತಿಗಳನ್ನು ಚುನಾಯಿಸಿ ಕಳುಹಿಸುವ ಮೂಲಕ ರಾಜ್ಯದ, ಜಿಲ್ಲೆಯ, ತಾಲೂಕಿನ, ಗ್ರಾಮದ ಮತ್ತು ನಮ್ಮ ಯುವ ಪೀಳಿಗೆಯ ಶ್ರೇಯೊಭಿವೃದ್ಧಿಗೆ ಕಾರಣೀಭೂತರಾಗಬೇಕು ಎಂದು ಹೇಳಿದರು.