ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ನಿತ್ಯ ಒಂದು ಸಾವಿರ ರೂ.ಗಳಿಂದ 2 ಸಾವಿರ ರೂ.ಗಳವರೆಗೆ ಜೇಬಿಗಿಳಿಸಿಕೊಂಡು ಹೋಗುವ ಕೆಲ ಭ್ರಷ್ಟ ನೌಕರರಿಗೆ ಕೆಲ ಅಧಿಕಾರಿಗಳು ಸಾಥ್‌ನೀಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಒಳಗೊಂಡ ವರದಿಯನ್ನು ವಿಜಯಪಥ ನಿನ್ನೆ (ಗುರುವಾರ) ಪ್ರಕಟಿಸಿತ್ತು.
ಇಂದು ಅಂದರೆ (ಏ.7) ಶುಕ್ರವಾರ ಮತ್ತೊಂದು ಸ್ಫೋಟಕ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಸಾರಿಗೆ ನಿಗಮಗಳಲ್ಲಿ ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ಹೊದ್ದು ಮಲಗಿದೆ ಎಂಬುವುದು ಇದರಿಂದ ಇನ್ನಷ್ಟು ಬಯಲಾಗುತ್ತಿದೆ.
ಹೌದು! ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ ಕೆಲಸ ಮಾಡುವುದಕ್ಕೆ ನೌಕರರಿಗೆ ಕಷ್ಟಸಾಧ್ಯವಾಗುತ್ತದೆ. ಆ ರೀತಿಯ ವಾತಾವರಣವನ್ನು ಸೃಷ್ಟಿಸುವ ಅಧಿಕಾರಿಗಳು ನೌಕರರನ್ನು ಇಕ್ಕಟ್ಟಿನ ಪರಿಸ್ಥಿತಿಗೆ ದೂಡುತ್ತಾರೆ. ಬಳಿಕ ಅವರಿಗೆ ಲಂಚದ ಬೇಡಿಕೆಯನ್ನು ತಮ್ಮ ಚೇಳಗಳ ಮೂಲಕ ಇಡುತ್ತಾರೆ. ಅವರ ಬೇಡಿಕೆಗೆ ಒಪ್ಪಿಕೊಳ್ಳುವ ನೌಕರರಿಗೆ ತಾತ್ಕಾಲಿಕವಾಗಿ ಅಥವಾ ಬಹುತೇಕ ಶಾಶ್ವತವಾಗಿ ಒಂದು ಪರಿಹಾರ ಕೊಡುತ್ತಾರೆ.
ಉದಾಹರಣೆ ತೆಗೆದುಕೊಂಡು ಹೇಳುವುದಾದರೆ, ಕೆಎಸ್‌ಆರ್‌ಟಿಸಿ ಚಾಮರಾಜನಗರ ಡಿಪೋದಲ್ಲಿ ಕೆಲಸ ಮಾಡುತ್ತಿರುವ ನೌಕರರ ಕುಟುಂಬ ಕೊಳ್ಳೇಗಾಲ ಡಿಪೋಗೆ ಹತ್ತಿರವಿರುವ ಸ್ಥಳದಲ್ಲಿ ವಾಸವಾಗಿದ್ದರೆ, ಅಂಥ ನೌಕರರನ್ನು ಕೊಳ್ಳೇಗಾಲಕ್ಕೆ ಡೆಪ್ಟೇಶನ್ ಮೇಲೆ ನಿಯೋಜನೆ ಮಾಡುತ್ತೇವೆ ಎಂದು ಅಧಿಕಾರಿಗಳು ತಮ್ಮ ಚೇಳಗಳ ಮೂಲಕ ನೌಕರರಿಗೆ ಮಾಹಿತಿ ನೀಡುತ್ತಾರೆ.
ಇನ್ನು ಕೊಳ್ಳೇಗಾಲದಿಂದ ನಿತ್ಯ ಚಾಮರಾಜನಗರಕ್ಕೆ ಹೋಗಿ ಡ್ಯೂಟಿ ಮಾಡಲು ಆಗುವುದಿಲ್ಲ ಎಂದು ನೌಕರರು ಕೊಳ್ಳೇಗಾಲ ಡಿಪೋಗೆ ವರ್ಗಾವಣೆ ಬಯಸಿ ಈ ಚೇಳಗಳನ್ನು ಭೇಟಿ ಮಾಡುತ್ತಾರೆ. ಚೇಳಗಳು ಆಗ ಅಧಿಕಾರಿಗಳ ಬೇಡಿಕೆ ಪೂರೈಸಿದರೆ ನಿಮ್ಮನ್ನು ವರ್ಗಾವಣೆ ಇಲ್ಲ ಡೆಪ್ಟೇಶನ್ ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡುತ್ತಾರೆ. ಸರಿ ಎಂದು ನೌಕರರು ಒಪ್ಪಿಕೊಂಡರೆ ಅಂಥ ನೌಕರರಿಗೆ ಡೆಪ್ಟೇಶನ್‌ಗೆ 10 ಸಾವಿರ ರೂಪಾಯಿ ಹಾಗೂ ವರ್ಗಾವಣೆ ಬಯಸಿದರೆ 30 ಸಾವಿರ ರೂಪಾಯಿ ಲಂಚ ಕೊಡಬೇಕು.
ಒಂದು ವೇಳೆ ಲಂಚ ಕೊಡಲು ಒಪ್ಪದಿದ್ದರೆ, ಅವರನ್ನು ವರ್ಗಾವಣೆ ಇಲ್ಲ ಡೆಪ್ಟೇಶನ್ ಮಾಡುವುದಕ್ಕೆ ಅಧಿಕಾರಿಗಳು ಒಪ್ಪುವುದಿಲ್ಲ. ಇನ್ನು ವಿಧಿ ಇಲ್ಲದೆ ನೌಕರರು ಡೆಪ್ಟೇಶನ್‌ಗಾಗಿ 10 ಸಾವಿರ ರೂಪಾಯಿಯನ್ನು ಮತ್ತು ವರ್ಗಾವಣೆಗಾಗಿ 30 ಸಾವಿರ ರೂಪಾಯಿ ಲಂಚ ನೀಡಲೇಬೇಕಿದೆ.
ಇನ್ನು ವರ್ಗಾವಣೆಗೊಂಡವರಿಗೆ ಬಹುತೇಕ ತಮ್ಮ ಸಮಸ್ಯೆ ಬಗೆಹರಿಸಿದೆ ಎಂದುಕೊಳ್ಳಬಹುದು. ಆದರೆ, 10 ಸಾವಿರ ರೂಪಾಯಿ ಲಂಚಕೊಟ್ಟು ಡೆಪ್ಟೇಶನ್ ಮೇಲೆ ನಿಯೋಜನೆಗೊಂಡ ನೌಕರರು ಕೆಲಸ ಮಾಡುವುದು ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ ಹೀಗೆ ಅವರು ಡೆಪ್ಟೇಶನ್‌ಗೊಂಡ ಡಿಪೋಗಳಲ್ಲಿ. ಆದರೆ ವೇತನ ಮಾತ್ರ ಅವರ ಮೂಲ ಡಿಪೋಗಳಲ್ಲೇ ಪಡೆಯಬೇಕು.
ಅಂದರೆ, ಒಂದು ಡಿಪೋನಿಂದ ಮತ್ತೊಂದು ಡಿಪೋಗೆ (ಕೊಳ್ಳೇಗಾಲ- ಚಾಮರಾಜನಗರ) 10 ನೌಕರರನ್ನು ತಲಾ 10 ಸಾವಿರ ರೂಪಾಯಿಯಂತೆ ಲಂಚ ಪಡೆದು ಡೆಪ್ಟೇಶನ್ ಮೇಲೆ ನಿಯೋಜನೆ ಮಾಡಿದರೆ, ಮತ್ತೆ ಅದೇ ಡಿಪೋದಿಂದ ಚಾಮರಾಜನಗರ-ಕೊಳ್ಳೇಗಾಲ) ಇನ್ನೊಂದು ಡಿಪೋಗೆ ಡೆಪ್ಟೇಶನ್ ಮೇಲೆ (ಅಂದರೆ 10:10 ಮಾದರಿಯಲ್ಲಿ) ಮತ್ತೆ ಆ 10 ನೌಕರರಿಂದಲೂ ತಲಾ 10 ಸಾವಿರ ರೂಪಾಯಿಯಂತೆ ಲಂಚ ಪಡೆದು ನಿಯೋಜನೆ ಮಾಡುತ್ತಿದ್ದಾರೆ.
ಇಲ್ಲಿ ಡಿಪೋಗಳಲ್ಲಿ ನೌಕರರ ಕೊರತೆಯೂ ಇರಬಾರದು ಅಂದರೆ 10 ಜನ ಕೊಳ್ಳೇಗಾಲ ಡಿಪೋದಿಂದ ಚಾಮರಾಜನಗರ ಡಿಪೋಗೆ ಡೆಪ್ಟೇಶನ್ ಮೇಲೆ ನಿಯೋಜನೆ ಗೊಂಡರೆ ಮತ್ತೆ ಚಾಮರಾಜನಗರ ಡಿಪೋದಿಂದ ಕೊಳ್ಳೇಗಾಲ ಡಿಪೋಗೆ 10 ನೌಕರರನ್ನು ಡೆಪ್ಟೇಶನ್ ಮೇಲೆ ನಿಯೋಜನೆ ಮಾಡುತ್ತಾರೆ. ಇದರಿಂದ ಡಿಪೋಗಳಲ್ಲಿ ನೌಕರರ ಸಮತೋಲನ ಕಾಯ್ದುಕೊಂಡಂತೆಯೂ ಆಯಿತು ಜತೆಗೆ 20 ನೌಕರರಿಗೆ 2 ಲಕ್ಷ ರೂಪಾಯಿಯನ್ನು ಲಂಚವಾಗಿ ಪಡೆದಂತೆಯೂ ಆಯಿತು ಎಂಬ ಲೆಕ್ಕಚಾರದಲ್ಲಿ ಕೆಲ ಭ್ರಷ್ಟ ಅಧಿಕಾರಿಗಳು ಮುಳುಗಿದ್ದಾರೆ.
ಇದು ಕೇವಲ ನಿಮಗೆ ನಿದರ್ಶನವಾಗಿ ತೋರಿಸಿರೋದು ಇದು ಬಹುತೇ ಸಾರಿಗೆಯ ಎಲ್ಲ ಡಿಪೋಗಳಲ್ಲು ಈ ಮಾದರಿಯ ವರ್ಗಾವಣೆ ಡೆಪ್ಟೇಶನ್ ಈಗಲೂ ನಡೆಯುತ್ತಲೇ ಇದೆ. ಆದರೆ, ಇದನ್ನು ಕೇಳ ಬೇಕಾದ ಕೆಎಸ್‌ಆರ್‌ಡಿಸಿ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ಸಹೇಬರು ಏನು ಕಾಣದಂತೆ ಇರುವುದು ಅಚ್ಚರಿಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ವಿಚಾರಿಸಲು ಎಂಡಿ ಅವರಿಗೆ ಫೋನ್ ಮೂಲಕ ವಿಜಯಪಥ ಸಂಪರ್ಕಿಸಿತಾದರೂ ಕರೆ ಸ್ವೀಕರಿಸಿದ ಅವರು ನಾವು ಬಿಸಿ ಇದ್ದೇವೆ ಸೋಮವಾರ ಕರೆ ಮಾಡಿ ಎಂದು ಹೇಳಿ ಕರೆ ಕಟ್ ಮಾಡಿದರು.
ಇನ್ನು ನಿಗಮದಲ್ಲಿ ವರ್ಗಾವಣೆ ಮತ್ತು ಡೆಪ್ಟೇಶನ್ ಹೆಸರಿನಲ್ಲಿ ನಡೆಯುತ್ತಿರುವ ಲಂಚಬಾಕತನಕ್ಕೆ ಬೇಸತ್ತಿರುವ ನೌಕರರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅಲ್ಲದೆ ಎಲ್ಲೋ ದೂರದ ಊರಿನಲ್ಲಿ ತಮ್ಮ ಕುಟುಂಬವನ್ನು ಬಿಟ್ಟು ಒಂದು ರೀತಿ ಅನಾಥರಂತೆ ಬದುಕು ಸಾಗಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿರುವ ಎಂಡಿ ಸಹೇಬರು ಇನ್ನಾದರೂ ಇತ್ತ ಗಮನ ನೀಡಿ ಅವಶ್ಯವಿರುವ ನೌಕರರಿಗೆ ಅನುಕೂಲ ಕಲ್ಪಿಸಿಕೊಡುವ ಮೂಲಕ ಭ್ರಷ್ಟ, ಲಂಚಬಾಕ ಅಧಿಕಾರಿಗಳ ಹೆಡೆಮುರಿಕಟ್ಟುವರೆ ಎಂಬುದನ್ನು ಕಾದು ನೋಡಬೇಕಿದೆ.