
ಬೆಂಗಳೂರು: ಸ್ಯಾಂಡಲ್‌ವುಡ್ ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ 77 ವರ್ಷದ ಬ್ಯಾಂಕ್ ಜನಾರ್ಧನ್ ಅವರು ತಡರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ತಡರಾತ್ರಿ 2.30ರಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸುಲ್ತಾನ್ ಪಾಳ್ಯದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3–4 ಗಂಟೆ ವೇಳೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ: ಪೋಷಕ ನಟ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಜನಾರ್ಧನ್ ಅವರು 500ಕ್ಕೂ ಹೆಚ್ಚು ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಅಲ್ಲದೇ, ಕಿರುತೆರೆ ಹಾಗೂ ರಂಗಭೂಮಿಯಲ್ಲೂ ತಮ್ಮ ಛಾಪು ಮೂಡಿಸಿ ಕನ್ನಡಿಗರ ಮನಗೆದ್ದಿದ್ದಾರೆ.
80, 90ರ ದಶಕದಲ್ಲಿ ಬಹುಬೇಡಿಕೆ ಹೊಂದಿದ್ದ ಹಾಸ್ಯನಟರಲ್ಲಿ ಒಬ್ಬರಾದ ಜನಾರ್ಧನ್ ಅವರು, ಉಪೇಂದ್ರ ನಿರ್ದೇಶನದ ಶ್, ತರ್ಲೆ ನನ್ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಗಣೇಶ ಸುಬ್ರಮಣ್ಯ, ಕೌರವ ಚಿತ್ರಗಳಲ್ಲಿ ಗಮನ ಸೆಳೆಯುವ ಪಾತ್ರ ನಿರ್ವಹಿಸಿದ್ದಾರೆ.
ಮಾಂಗಲ್ಯ, ರೋಬೋ ಫ್ಯಾಮಿಲಿ, ಪಾಪ ಪಾಂಡು, ಜೋಕಾಲಿ ಸೇರಿದಂತೆ ಸಾಲು ಸಾಲು ಸೀರಿಯಲ್‌ಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದು ಸಿನಿಮ ರಸಿಕರ ಮನಸೂರೆಗೊಂಡಿದ್ದಾರೆ.
ಗಣ್ಯರ ಕಂಬನಿ: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ ಎಂಬ ವಿಷಯಕೇಳಿ ಸ್ಯಾಂಡಲ್‌ವುಡ್ ಮಂದಿ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಅವರ ಕುಟುಂಬದವರಿಗೆ ಈ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.