ಬೆಂಗಳೂರು: ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಡಾ. ತಿಪ್ಪೇಸ್ವಾಮಿ ವೆಂಕಟೇಶ್ ವಿ.ಟಿ.ಎಸ್.ರವರು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಹಾಗೂ ರಾಜ್ಯ ಸಂವಹನಾ ಉಸ್ತುವಾರಿಗಳಾದ ಬ್ರಿಜೇಶ್ ಕಾಳಪ್ಪ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿಗೆ ಶನಿವಾರ ಸೇರ್ಪಡೆಯಾದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಡಾ. ತಿಪ್ಪೇಸ್ವಾಮಿ ವೆಂಕಟೇಶ್‌ರವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಪೃಥ್ವಿ ರೆಡ್ಡಿ, “ಡಾ. ತಿಪ್ಪೇಸ್ವಾಮಿ ವೆಂಕಟೇಶ್‌ರವರು ಕೃಷಿಯಲ್ಲಿ ಬಿಎಸ್ಸಿ, ಎಂಬಿಎ ಹಾಗೂ ಪಿಜಿಡಿಎಇಎಂ ಶಿಕ್ಷಣ ಪಡೆದಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಬಿಎಂಪಿ, ಎಸ್‌ಬಿಐ ಹಾಗೂ ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಪಾರ ಅನುಭವವನ್ನು ಇವರು ಹೊಂದಿದ್ದಾರೆ ಎಂದರು.
ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ತಮ್ಮ 40ನೇ ವಯಸ್ಸಿನಲ್ಲಿ ಸರ್ಕಾರಿ ನೌಕರಿಯನ್ನು ತ್ಯಜಿಸಿ ರಾಜಕೀಯ ಪ್ರವೇಶಿಸಿದ್ದರು. ಇಂತಹ ಸುಶಿಕ್ಷಿತ ಹಾಗೂ ಜನಪರ ಕಾಳಜಿಯುಳ್ಳ ನಾಯಕರು ಆಮ್ ಆದ್ಮಿ ಪಾರ್ಟಿ ಸೇರುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ಸೇರಿ ಮಾತನಾಡಿದ ಡಾ. ತಿಪ್ಪೇಸ್ವಾಮಿ ವೆಂಕಟೇಶ್, “ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ರಚನೆಯಾಗುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ, ಆಮ್ ಆದ್ಮಿ ಪಾರ್ಟಿಗೆ ಜನಬೆಂಬಲ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದೆ. ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರದ ಶಿಕ್ಷಣ ಹಾಗೂ ಆರೋಗ್ಯ ಕ್ರಾಂತಿಯನ್ನು ಗಮನಿಸಿರುವ ಜನರು ಕರ್ನಾಟಕದಲ್ಲೂ ಎಎಪಿ ಆಡಳಿತವನ್ನು ಬಯಸುತ್ತಿದ್ದಾರೆ ಎಂದರು.
ಇನ್ನು ಪ್ರಣಾಳಿಕೆಯಲ್ಲಿ ಆಮ್ ಆದ್ಮಿ ಪಾರ್ಟಿ ನೀಡಿರುವ ಗ್ಯಾರಂಟಿಗಳು ಜನಪರ ನಿಲುವು ಹಾಗೂ ದೂರದೃಷ್ಟಿಯನ್ನು ಹೊಂದಿವೆ. ರಾಜ್ಯಾದ್ಯಂತ ಜನರಿಂದ ಸಲಹೆಗಳನ್ನು ಸಂಗ್ರಹಿಸಿ ಪ್ರಣಾಳಿಕೆ ಸಿದ್ಧಪಡಿಸಿರುವುದು ಆಮ್ ಆದ್ಮಿ ಪಾರ್ಟಿಯು ಬೇರೆ ಪಕ್ಷಗಳಿಗಿಂತ ಭಿನ್ನ ಎಂಬುದು ಸಾಬೀತುಪಡಿಸಿದೆ ಎಂದು ಹೇಳಿದರು. ರುದ್ರಯ್ಯ ನವಲಿ ಮಠ ಮತ್ತಿತರರು ಇದ್ದರು.