ಬೆಂಗಳೂರು: ಸರ್ಕಾರ ಸಾರಿಗೆ ನೌಕರರ ಹೋರಾಟಕ್ಕೆ ಮಣಿದು ಅವರ ಬೇಡಿಕೆಯನ್ನು ಈಡೇರಿಸುವುದಕ್ಕೆ ಮುಂದಾಗಿತ್ತು ಎಂಬುವುದಕ್ಕೆ ಹಲವು ನಿದರ್ಶನಗಳು ಇವೆ.
ಸರ್ಕಾರ ನೌಕರರ ಬೇಡಿಕೆಯಾದ ಸರ್ಕಾರಿ ನೌಕರರಿಗೆ ಸರಿ ಸಮಾನ ವೇತನ ನೀಡುವುದಕ್ಕೆ ಒಪ್ಪಿಗೆ ಸೂಚಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಾರಿಗೆ ನಿಗಮದ ಅಧಿಕಾರಿಗಳಿಗೆ 6ನೇ ವೇತನ ಆಯೋಗದ ಮಾದರಿಯಲ್ಲಿ ವೇತನ ನೀಡುವುದಕ್ಕೆ ಹಲವಾರು ಸುತ್ತಿನ ಮಾತುಕತೆಯನ್ನು ನಡೆಸಿದ್ದು, ಈ ನಡುವೆ ಸಂಘಟನೆಗಳಲ್ಲಿ ಒಮ್ಮತದ ನಿರ್ಧಾರ ಮೂಡದಿದ್ದರಿಂದ ಸರ್ಕಾರ ವೇತನ ಆಯೋಗದಿಂದ ಹಿಂದೆ ಸರಿದಿದೆ ಎಂಬುವುದು ಪಕ್ಕವಾಗಿದೆ.
ಕೆಲ ಸಂಘಟನೆಗಳು ಸಾರಿಗೆ ನೌಕರರ ಹೋರಾಟವನ್ನು ಜೀವಂತವಾಗಿ ಇಟ್ಟುಕೊಂಡರೆ ನಾಲ್ಕುವರ್ಷಕ್ಕೊಮ್ಮೆ ಸಂಘಟನೆಗಳು ಇವೆ ಎಂಬುದನ್ನು ತೋರಿಸಬಹುದು ಎಂಬ ಲೆಕ್ಕಾಚಾರದಲ್ಲಿ ಸಂಘಟನೆಗಳ ಮುಖಂಡರು 6ನೇ ವೇತನ ಆಯೋಗ ಮಾದರಿ ಅಥವಾ ಸರಿ ಸಮಾನ ವೇತನದ ಬದಲಿಗೆ ಅಗ್ರಿಮೆಂಟ್ ಮೂಲಕವೇ ವೇತನ ಹೆಚ್ಚಳ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನು ಶೇ.95ರಷ್ಟು ನೌಕರರ ಬೇಡಿಕೆಯಾದ ಸರಿ ಸಮಾನ ವೇತನವನ್ನು ವೇತನ ಆಯೋಗ ಮಾದರಿಯಲ್ಲಿ ಕೊಡುವುದಕ್ಕೆ ಸರ್ಕಾರ ಒಪ್ಪಿಕೊಂಡು ನಿಕಟ ಪೂರ್ವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿಯೇ ಹೇಳಿದ್ದರು. ಆದರೆ, ಕೆಲ ಸಂಘಟನೆಗಳ ನಡೆಯಿಂದ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಿತು.
ಇನ್ನು ಮುಖ್ಯಮಂತ್ರಿಗಳು ಕೂಡ ಸಾರಿಗೆ ನೌಕರರ ಸಮಸ್ಯೆ ಏನೆಂದು ನಮಗೆ ಗೊತ್ತಿದೆ. ಹೀಗಾಗಿ ಸೂಕ್ತ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮೂಲಕ ಒಂದು ಶಾಶ್ವತ ಪರಿಹಾರ ನೀಡುತ್ತೇವೆ ಎಂದು ಸಾರಿಗೆ ಸಮಾರಂಭಗಳಲ್ಲಿ ಮತ್ತು ನೌಕರರು ಮನವಿ ಸಲ್ಲಿಸುವ ವೇಳೆಯು ಭರವಸೆ ಕೂಡ ನೀಡಿದ್ದರು.
ನೋಡಿ ಸರ್ಕಾರ ತಾನೇ ಕೊಟ್ಟಿರುವ ಭರವಸೆಯನ್ನು ಹುಸಿ ಮಾಡುವುದು ಬೇಡ. ಈಗ ನಾವು ಅದನ್ನು ಕೈ ಬಿಟ್ಟರೆ ನಾವು ಕೊಟ್ಟ ಮಾತನ್ನು ತಪ್ಪಿದಂತಾಗುತ್ತದೆ. ಆದ್ದರಿಂದ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಮೂಲಕ ಸಾರಿಗೆ ನೌಕರರ ಮತ್ತು ಅವರ ಕುಟುಂಬದವರಿಗೆ ಕೊಟ್ಟ ಮಾತು ಉಳಿಕೊಳ್ಳೋಣ ಎಂಬ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಸಿಎಂ ಅವರ ಮನವೊಲಿಸಿದ್ದರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಸರ್ಕಾರದ ನಿರ್ಧಾರವನ್ನೇ ಬದಲಿಸುವ ಮಟ್ಟಿಗೆ ತಮಗೆ ಅಧಿಕಾರವಿಲ್ಲದಿದ್ದರು ನೌಕರರ ಹಣಿಯುವ ಕೆಲಸವನ್ನು ಮಾಡಿದವು ಕೆಲ ಸಂಘಟನೆಗಳು. ಇನ್ನು ಈ ಅಧಿಕಾರ ಇಲ್ಲದ ಸಂಘಟನೆಗಳಿಂದ ಇಷ್ಟೆಲ್ಲ ಆಗಿದೆ ಎಂದರೆ ಇದಕ್ಕೆಲ್ಲ ಪರಿಹಾರ ಸಂಘಟನೆಗಳ ಚುನಾವಣೆ ನಡೆಸುವುದೊಂದೆ ಎಂದು ನೌಕರರು ಸರ್ಕಾರ ಮತ್ತು ಸಾರಿಗೆ ಆಡಳಿತ ಮಂಡಳಿ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಆದರೆ, ಇದಕ್ಕೆಲ್ಲ ಪರಿಹಾರ ಸಿಗಬೇಕು ಎಂದರೆ ಈ ಬಾರಿಯ ವಿಧಾನಸಭಾ ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾಗುವವರೆಗೂ ಕಾಯಲೇ ಬೇಕಿದೆ.