ಚಾಮರಾಜನಗರ: ತೀವ್ರ ಕುತೂಹಲ ಮೂಡಿಸಿರುವ ಚಾಮರಾಜನಗರ ವಿಧಾನಸಭಾ ಚುನಾವಣೆ ಫಲಿತಾಂಶದ ಮತ ಎಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗ ಶೆಟ್ಟಿ ಗೆಲುವು ಸಾಧಿಸಿದ್ದಾರೆ.
ಅವರ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಸೋಲು ಅನುಭವಿಸುವ ಮೂಲಕ ತೀವ್ರ ಮುಖಭಂಗವಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಸೋಲು ಕಂಡಿದ್ದು, ಈ ಮೂಲಕ ಲಿಂಗಾಯತ ನಾಯಕನಿಗೆ ಬಿಜೆಪಿ ಕೊನೆ ಮೊಳೆ ಹೊಡೆಯಿತಾ ಎಂಬ ಪ್ರಶ್ನೆ ಕಾಡುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗ ಶೆಟ್ಟಿ ಹತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ವಿ.ಸೋಮಣ್ಣ ಚಾಮರಾಜನಗರ ಹಾಗೂ ವರುಣಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣಗೆ ಮುಖಭಂಗವಾಗಿದೆ.
ಇನ್ನು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಮುನ್ನಡೆ ಸಾಧಿಸಿದ್ದು, ವಿ.ಸೋಮಣ್ಣ ಹಿನ್ನಡೆಯಲ್ಲಿದ್ದಾರೆ.
ಚಾಮರಾಜನಗರದಲ್ಲಿ ನಿರಂತರ 4 ಬಾರಿ ಶಾಸಕನಾದ ಮೊದಲಿಗರಾದ ಸಿ.ಪುಟ್ಟರಂಗಶೆಟ್ಟಿ ತಾವು ಸೋಲಿಲ್ಲದ ಸರದಾರ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಸುಮಾರು ಹತ್ತೊಂಬತ್ತು ಹಂತದಲ್ಲಿ ನಡೆದ ಮತ ಎಣಿಕೆಯಲ್ಲಿ 7,383 ಮತ ಅಂತರದಲ್ಲಿ ಸಿ.ಪುಟ್ಟರಂಗಶೆಟ್ಟಿಗೆ ಜಯ ಸಾಧಿಸಿದ್ದು, ಸಿ.ಪುಟ್ಟರಂಗಶೆಟ್ಟಿ 83,136 ಮತಗಳನ್ನು ಪಡೆದಿದ್ದರೆ, ವಿ.ಸೋಮಣ್ಣ 75,753 ಮತಗಳನ್ನು ಪಡೆದಿದ್ದಾರೆ.