ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬನ್ನೂರು: ರೈತರು ಪಡೆದ ಸಾಲಗಳಿಗೆ ಬಡ್ಡಿ ಕಟ್ಟಿಸಿಕೊಂಡು ಸಾಲ ರಿನಿವಲ್ ಮಾಡಿ ಕೊಡುವಂತೆ ಒತ್ತಾಯಿಸಿ ಬನ್ನೂರು ಎಸ್ಬಿಐ ಬ್ಯಾಂಕ್ ಶಾಖೆ ಮುಂದೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಬನ್ನೂರು ಗ್ರಾಮಾಂತರ ಘಟಕದ ಪದಾಧಿಕಾರಿಗಳು ಇಂದು ಪ್ರತಿಭಟನೆ ನಡೆಸಿದರು.
ಈವರೆಗೂ ರೈತರು ಅಭಣದ ಮೇಲೆ ಕೃಷಿ ಸಾಲ ಪಡೆದಿದ್ದು, ಸಾಲದ ಅವಧಿ ಮುಗಿದಿರುವ ರೈತರಿಗೆ ಶಾಖೆಯಲ್ಲಿ ಬಡ್ಡಿ ಕಟ್ಟಿಸಿಕೊಂಡು ಹೊಸ ಸಾಲವಾಗಿ ರಿನಿವಲ್ ಮಾಡಿಕೊಡುತ್ತಿದ್ದರು. ಆದರೆ ಈಗ ಅಸಲು – ಬಡ್ಡಿ ಸೇರಿಸಿ ಕಟ್ಟಬೇಕೆಂದು ನೊಟೀಸ್ ನೀಡಿ ಕಿರುಕುಳ ನೀಡುತ್ತಿರುವುದು ರೈತರಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಕಿಡಿಕಾರಿದ್ದಾರೆ.
ರೈತರಿಗೆ ಯಾವುದೇ ಸಂಬಳ ಬರುವುದಿಲ್ಲ, ಮಾಸಿಕ ಹಾಗೂ ತ್ರೈಮಾಸಿಕ ಆದಾಯ ಬರುವುದಿಲ್ಲ, ಅಲ್ಲದೆ ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಹಾಗೂ ಹವಾಮಾನ ವೈಪರೀತ್ಯದಿಂದ ಬೆಳೆ ಬೆಳೆದರು ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿದ್ದು ರೈತರು ಹಲವಾರು ಸಮಸ್ಯೆಗಳಿಗೆ ಸಿಲುಕಿ ಜೀವನ ನಿರ್ವಹಣೆ ನಡೆಸುವುದೇ ಕಷ್ಟವಾಗುತ್ತಿದೆ ಎಂದು ಹೇಳಿದರು.
ಹೀಗಾಗಿ ಬಂಗಾರದ ಅಭರಣಗಳ ಸಾಲದ ಮೇಲೆ ಹಾಗೂ ಇತರೆ ಸಾಲಗಳ ಮೇಲಿನ ಬಡ್ಡಿ ಕಟ್ಟಿಸಿ ಕೊಂಡು ರಿನಿವಲ್ ಮಾಡಿಕೊಡುವಂತೆ ಒತ್ತಾಯಿಸಿ ಬನ್ನೂರಿನ ಬ್ಯಾಂಕ್ ಶಾಖೆ ಮುಂದೆ ಪ್ರತಿಭಟನೆ ನಡೆಸಿ ಬ್ಯಾಂಕ್ ವ್ಯವಸ್ಥಾಪಕರ ಮುಖಾಂತರ ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕರಿಗೆ ಒತ್ತಾಯ ಪತ್ರ ಸಲ್ಲಿಸಿದ್ದರು.
ಪ್ರಸಕ್ತ ಪೂರ್ವ ಮುಂಗಾರು ಮಳೆ ಆರಂಭವಾಗಿ ಕೃಷಿ ಚಟುವಟಿಕೆ ಕೈಗೊಳ್ಳಬೇಕಾದ ಕಾರಣ ಹಣದ ಅವಶ್ಯಕತೆ ಇದ್ದು ಸಾಲಗಳಿಗೆ ಅಸಲು ಮತ್ತು ಬಡ್ಡಿ ಕಟ್ಟಿ ಸಾಲ ರಿನಿವಲ್ ಮಾಡಿಕೊಳ್ಳಲು ಸಾಧ್ಯವಾಗದೆ ಇರುವುದರಿಂದ ಬಡ್ಡಿ ಕಟ್ಟಿಸಿಕೊಂಡು ಹಿಂದಿನಂತೆ ಸಾಲ ರಿನಿವಲ್ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ ವರ್ಷ ಮಳೆ ಇಲ್ಲದೆ ಭೀಕರ ಬರಗಾಲದಿಂದ ಬೆಳೆ ಬೆಳೆಯಲು ಸಾಧ್ಯವಾಗದೆ ಜೀವನ ನಿರ್ವಹಣೆ ಮಾಡಿಕೊಳ್ಳುವುದೇ ಕಷ್ಟಕರವಾಗಿತ್ತು. ಸಾಲ ತೀರಿಸಲು ಸಾಧ್ಯವಾಗದ ಕಾರಣ ಕೃಷಿ ಚಟುವಟಿಕೆಗೆ ಮತ್ತೆ ಸಾಲ ಬೇಕಾಗಿದ್ದು ಸಿಬಿಲ್ ಸ್ಕೋರ್ ಪರಿಗಣಿಸದೆ ಹೊಸ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

ಇನ್ನು ಅಲ್ಪಾವಧಿ ಸಾಲವನ್ನು ಮಧ್ಯಮಾವಧಿ ಸಾಲವನ್ನಾಗಿ ಹಾಗೂ ಮಧ್ಯಮಾವಧಿ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಪರಿವರ್ತನೆ ಮಾಡಿಕೊಂದು ಸಹಕಾರ ನೀಡಬೇಕು. ರೈತರ ಎಲ್ಲ ಮಕ್ಕಳಿಗೂ ಶೈಕ್ಷಣಿಕ (ವಿದ್ಯಾಭ್ಯಾಸ) ಸಾಲಗಳನ್ನು ಎಲ್ಲ ಪದವಿಗಳಿಗೂ ಕೊಡಬೇಕು. ಮುದ್ರಾ ಯೋಜನೆಯಡಿ ಮಹಿಳೆ ಹಾಗೂ ಯುವಕರಿಗೆ ಉದ್ಯೋಗ ಹಾಗೂ ಹೈನುಗಾರಿಕೆ ಸಾಲಗಳನ್ನು ಕೊಡಬೇಕು.
ಸಾಲ ಮೇಳಗಳ ಮುಖಾಂತರ ಎಮ್ಮೆ, ಹಸು, ಕುರಿ, ಮೇಕೆ ಸಾಕಾಣಿಕೆ ಮಾಡಲು ನೇರ ಸಾಲ, ಸಹಾಯ ಧನ ಇರುವ ಯೋಜನೆಗಳನ್ನು ವರ್ಷಕ್ಕೆ ಎರಡು ಬಾರಿ ಸಾಲ ಮೇಳ ನಡೆಸಿ ಸಾಲ ಕೊಡಬೇಕು. ರೈತರಿಗೆ ಹಾಗೂ ಮಹಿಳೆಯರಿಗೆ ಸಹಾಯ ಧನ ಯೋಜನೆಯಡಿ ಸಾಲ ಇರುವ ಬಗ್ಗೆ ಬ್ಯಾಂಕ್ ಮುಂದೆ ನಾಮಫಲಕ ಕಡ್ಡಾಯವಾಗಿ ಹಾಕಬೇಕು ಎಂದರು.
ಗ್ರಾಮೀಣ ಭಾಗದ ಬ್ಯಾಂಕ್ ಶಾಖೆಗಳಲ್ಲಿ ಮುಗ್ದ ಜನರು, ರೈತರು ಹಾಗೂ ಅವಿದ್ಯಾವಂತರು ಹೆಚ್ಚು ಜನರು ಇರುವ ಕಾರಣ ಅವರ ಅನುಕೂಲಕ್ಕಾಗಿ ಕನ್ನಡ ಮಾತನಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೆ ನೇಮಕ ಮಾಡಬೇಕು. ಪ್ರತಿ 3 (ಮೂರು) ತಿಂಗಳಿಗೊಮ್ಮೆ ಗ್ರಾಹಕರ ಕುಂದು ಕೊರತೆಗಳ ಸಭೆ ಕಡ್ಡಾಯವಾಗಿ ನಡೆಸಿ ಮಾಹಿತಿ ನೀಡಬೇಕು.
ಈ ಎಲ್ಲ ಬೇಡಿಕೆಗಳು ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಒಂದು ವಾರ ಗಡುವು ನೀಡುತ್ತಿದ್ದು ಸಮಸ್ಯೆ ಬಗೆಹರಿಸದಿದ್ದರೆ ಬ್ಯಾಂಕ್ ಮುಂದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ವಹಿಸಿದ್ದರು. ತಾಲೂಕು ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ಬನ್ನೂರು ಗ್ರಾಮಾಂತರ ಘಟಕದ ಮುಖಂಡರಾದ ಅತ್ತಹಳ್ಳಿ ಸಿ.ಲಿಂಗಣ್ಣ, ಅತ್ತಹಳ್ಳಿ ಅರುಣ್ ಕುಮಾರ್, ಬನ್ನೂರು ಸೂರಿ, ಪಿ.ಚೇತನ್, ಎ.ಎಂ.ರಾಮಕೃಷ್ಣ, ಕುಂತನಹಳ್ಳಿ ಕುಳ್ಳೇಗೌಡ, ರಾಮ, ಅತ್ತಹಳ್ಳಿ ಮಧು, ಎ.ಪಿ.ನವೀನ, ಹೊನ್ನಯ್ಯ, ಚಾಮನಹಳ್ಳಿ ನಿಂಗಣ್ಣ, ಕರಿಯಪ್ಪ ಇನ್ನು ಮುಂತಾದವರು ಇದ್ದರು.
Related
