ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪೂರ್ವ ವಿಭಾಗದ ಘಟಕ-15ರಲ್ಲಿ ಮುಷ್ಕರದಿಂದ ವಜಾಗೊಂಡು ಕೋರ್ಟ್ ಮೂಲಕ ಮತ್ತೆ ಕರ್ತವ್ಯ ಪಡೆದಿರುವ ನೌಕರರಿಗೆ ಸರಿಯಾಗಿ ಡ್ಯೂಟಿ ಕೊಡುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಇದರ ಜತೆಗೆ ಇನ್ನೂ ಪ್ರಕರಣ ಪೂರ್ತಿ ಇತ್ಯರ್ಥವಾಗದ ಕಾರಣ ಕೋರ್ಟ್‌ಗೆ ನೌಕರರು ಹೋಗಬೇಕಾದ ದಿನದಂದು ರಜೆ ಕೊಡುತ್ತಿಲ್ಲ ಎಂದು ನೌಕರರ ಅಲವತ್ತುಕೊಂಡಿದ್ದಾರೆ.
ವೇತನ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಕಳೆದ 2021ರ ಏಪ್ರಿಲ್ 7ರಂದು ಏ.21ರವರೆಗೂ ಮುಷ್ಕರ ಹೂಡಿದ ನಾಲ್ಕೂ ನಿಗಮಗಳ ನೌಕರರಲ್ಲಿ ಅತಿ ಹೆಚ್ಚು ನೌಕರರನ್ನು ಬಿಎಂಟಿಸಿಯಲ್ಲಿ ವಜಾ, ಅಮಾನತು ಮಾಡಲಾಗಿತ್ತು. ಬಳಿಕ ಅಮಾನತು ಮಾಡಿದವರನ್ನು ವಾರದೊಳಗೆ ವಾಪಸ್ ಕರೆಸಿಕೊಳ್ಳಲಾಯಿತು.
ಆದರೆ, ವಾಜಾಗೊಂಡ ನೌಕರರನ್ನು ನ್ಯಾಯಾಲಯದ ಆದೇಶ ಬರುವವರೆಗೂ ತೆಗೆದುಕೊಳ್ಳದೆ ಇನ್ನು ಕೆಲ ನೌಕರರನ್ನು ಷರತ್ತು ಬದ್ಧವಾಗಿ ತೆಗೆದುಕೊಳ್ಳಲಾಗಿದೆ. ಈಗ ನ್ಯಾಯಾಲಯದ ಮದ್ಯಂತರ ಆದೇಶದ ಮೇರೆಗೆ ಮರು ನೇಮಕಗೊಂಡಿರುವ ನೌಕರರನ್ನು ಅವರ ಮಾತೃ ಘಟಕ ಮತ್ತು ವಿಭಾಗದಲ್ಲಿ ಡ್ಯೂಟಿ ಕೊಡದೆ ಬೇರೆ ಘಟಕ ಮತ್ತು ವಿಭಾಗದಲ್ಲಿ ನೇಮಕ ಮಾಡಿದ್ದಾರೆ.
ಇದನ್ನು ಒಪ್ಪಿಕೊಂಡಿರುವ ನೌಕರರಿಗೆ ಈಗ ಸರಿಯಾಗಿ ಡ್ಯೂಟಿ ಕೊಡುವಲ್ಲಿಯೂ ಮತ್ತು ರಜೆ ಕೊಡುವಲ್ಲಿ ಮೀನಮೇಷ ಎಣಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಮರು ನೇಮಕಗೊಂಡಿರುವ ನೌಕರರಿಗೆ ಅವರ ಇಎಲ್, ಸಿಎಲ್ ಮತ್ತು ಸಿಎಂಎಲ್‌ಗಳನ್ನು ಕಡಿತ ಮಾಡಲಾಗಿದೆ. ಅಲ್ಲದೆ ಇಎಲ್‌ಅನ್ನು ಕೊಡದೆ ಸತಾಯಿಸುತ್ತಿದ್ದಾರೆ ಎಂದು ನೌಕರರ ಆರೋಪಿಸಿದ್ದಾರೆ.
ಇನ್ನು ಒಂದೊಂದು ಘಟಕಕಗಳಲ್ಲಿ ಒಂದೊಂದು ರೂಲ್ಸ್ ಮಾಡಿಕೊಂಡಿದ್ದು, ಇದೇ ಪೂರ್ವ ವಿಭಾಗದ ಒಂದು ಘಟಕದಲ್ಲಿ ರಜೆ ಮಂಜೂರು ಮಾಡುತ್ತಿದ್ದರೆ 15ನೇ ಘಟಕದಲ್ಲಿ ರಜೆ ಮಂಜೂರು ಮಾಡದೆ ಗೈರುಹಾಜರಿ ತೋರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಘಟಕ ವ್ಯವಸ್ಥಾಪಕರ ನಡೆಯನ್ನು ಗಮನಿಸಿ ಸರಿಯಾದ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.