ಕೋಲ್ಕತ್ತಾ: ಸರಕು ಸಾಗಣೆಯ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಹಲವು ಬೋಗಿಗಳು ಹಳಿತಪ್ಪಿರುವುದು ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಭಾನುವಾರ ಬೆಳಗ್ಗೆ 4 ಗಂಟೆಯ ಸುಮಾರಿಗೆ ಅವಘಡ ಸಂಭವಿಸಿದ್ದು, ಒಂದು ಗೂಡ್ಸ್ ರೈಲಿನ ಹಿಂಬದಿಗೆ ಇನ್ನೊಂದು ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ. ಘಟನೆಯಿಂದ ರೈಲಿನ 12 ಬೋಗಿಗಳು ಹಳಿತಪ್ಪಿವೆ. ಅದೃಷ್ಟವಶಾತ್ ಅಪಘಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಂದು ಗೂಡ್ಸ್ ರೈಲು ಚಾಲಕನಿಗೆ ಸಣ್ಣ ಪ್ರಮಾಣದ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಎರಡೂ ಗೂಡ್ಸ್ ರೈಲುಗಳು ಖಾಲಿಯಾಗಿದ್ದು, ಅಪಘಾತವಾಗಲು ಕಾರಣವೇನು ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ಅವಘಡದಿಂದ ಆದ್ರಾ ವಿಭಾಗದ ರೈಲು ಸಂಚಾರಕ್ಕೆ ತೊಂದರೆಯಾಗಿದೆ. ಆದ್ರಾ ವಿಭಾಗವು ಪಶ್ಚಿಮ ಬಂಗಾಳದ 4 ಜಿಲ್ಲೆಗಳಿಗೆ ಸೇವೆ ಕಲ್ಪಿಸುತ್ತಿದೆ. ಇದು ಆಗ್ನೇಯ ರೈಲ್ವೆಯ ಅಡಿಯಲ್ಲಿ ಬರುತ್ತದೆ.
ಅಲ್ಲದೇ ಪಶ್ಚಿಮ ಮಿಡ್ನಾಪುರ, ಬಂಕುರಾ, ಪುರುಲಿಯಾ ಮತ್ತು ಬುರ್ದ್ವಾನ್ ಮತ್ತು ಜಾರ್ಖಂಡ್‌ನ ಮೂರು ಜಿಲ್ಲೆಗಳಾದ ಧನ್‌ಬಾದ್, ಬೊಕಾರೋ ಮತ್ತು ಸಿಂಗ್‌ಭೂಮ್‌ಗೆ ಸಂಚಾರ ಕಲ್ಪಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುರುಲಿಯಾ ಎಕ್ಸ್‌ಪ್ರೆಸ್‌ನಂತಹ ರೈಲುಗಳು ಈ ವಿಭಾಗದಿಂದ ಚಲಿಸುವ ಸಾಧ್ಯತೆಯಿದ್ದು, ರೈಲ್ವೆ ಆದಷ್ಟು ಬೇಗ ಅಪ್‌ಲೈನ್ ಅನ್ನು ತೆರೆಯಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಘಟನೆಯಿಂದಾಗಿ 14 ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಅಲ್ಲದೇ 3 ರೈಲು ಮಾರ್ಗ ಬದಲಾವಣೆ ಮಾಡಿ ಸಂಚಾರ ಮಾಡಲಿದೆ. ಇನ್ನೂ 2 ರೈಲುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಇನ್ನು ಒಡಿಶಾ ತ್ರಿವಳಿ ರೈಲು ದುರಂತ ಸಂಭವಿಸಿದ ಒಂದು ತಿಂಗಳಲ್ಲಿ ಈ ಅಪಘಾತ ಸಂಭವಿಸಿದ್ದು, ಈ ರೈಲುಗಳ ಅಪಘಾತಗಳು ಏಕೆ ನಡೆಯುತ್ತಿವೆ ಎಂಬ ಅನುಮಾನವು ಪ್ರಜ್ಞಾನಂತ ನಾಗರಿಕರಲ್ಲಿ ಹುಟ್ಟಿಕೊಳ್ಳುತ್ತಿದೆ.