ವಿಜಯಪುರ: ವಿಧಾನಸಭಾ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಣೆ ಮಾಡಿರುವಂತೆ ಸಾರಿಗೆ ನೌಕರರಿಗೆ ವೇತನ ಆಯೋಗ ಜಾರಿಗೆ ಒತ್ತಾಯ ಮಾಡಬೇಕು ಎಂದು ನೌಕರರು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಡಿಸಿಸಿ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಅವರನ್ನು ನಗರದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿರುವ ವಿಜಯಪುರ ವಿಭಾಗದ ಕೂಟದ ಪದಾಧಿಕಾರಿಗಳು ವೇತನ ಆಯೋಗ ಮಾದರಿಯಲ್ಲಿ ನಾಲ್ಕೂ ನಿಗಮಗಳ ಅಧಿಕಾರಿಗಳಿಗೆ ಮತ್ತು ನೌಕರರಿಗೆ ವೇತನ ಜಾರಿ ಮಾಡಲು ವಿನಂತಿಸಿದ್ದಾರೆ.
ಇನ್ನು 2021ರ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ಕಾರ್ಮಿಕರನ್ನು ವಜಾ ಮಾಡಲಾಗಿದೆ. ಆ ಕಾರ್ಮಿಕರ ಹಾಗೂ ಕುಟುಂಬದವರ ಮೇಲೆ ಎಫ್‌ಐಆರ್ ಮಾಡಲಾಗಿದೆ. ಹೀಗಾಗಿ ವಜಾಗೊಂಡಿರುವ ಕಾರ್ಮಿಕರನ್ನು ಯಾವುದೇ ಷರತ್ತುಗಳಿಲ್ಲದೆ ಮರಳಿ ಕರ್ತವ್ಯಕ್ಕೆ ತೆಗೆದುಕೊಳ್ಳಬೇಕು ಹಾಗೂ ಎಫ್ಐಆರ್ ಹಿಂಪಡೆಯಬೇಕು.
ಸುಮಾರು 25 ವರ್ಷಗಳಿಂದ ಸಾರಿಗೆ ನಿಗಮದಲ್ಲಿ ಚುನಾವಣೆ ಆಗಿಲ್ಲ. ಆದಷ್ಟು ಬೇಗಾ ಚುನಾವಣೆ ಮಾಡಿಸಬೇಕು. ಈ ಬಗ್ಗೆ ಸರ್ಕಾರ ಶೀಘ್ರ ತೀರ್ಮಾನ ತೆಗೆದುಕೊಳ್ಳುವುಕ್ಕೆ ನೀವು ಆಗ್ರಹಿಸಬೇಕು.
ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ವೇತನ ಆಯೋಗ ಮಾದರಿ ಅಥವಾ ಸರಿಸಮಾನ ವೇತನ ಜಾರಿ ಮಾಡಲು ತಾವು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಒತ್ತಾಯ ಮಾಡಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ಮುಶ್ರೀಫ್ ಅವರಿಗೆ ಸಲ್ಲಿಸಿದ್ದಾರೆ.
ಕೂಟದ ಪದಾಧಿಕಾರಿಗಳ ಮನವಿ ಪತ್ರ ಸ್ವೀಕರಿಸಿದ ಅಬ್ದುಲ್ ಹಮೀದ್ ಮುಶ್ರೀಫ್, ನಮ್ಮ ಪಕ್ಷ ಚುನಾವಣೆ ವೇಳೆ ಕೊಟ್ಟಿರುವ ಭರವಸೆ ನೆನಪಿದೆ. ಹೀಗಾಗಿ ಈ ನಿಮ್ಮ ಬೇಡಿಕೆಗಳ ಬಗ್ಗೆ ಆದಷ್ಟು ಶೀಘ್ರದಲ್ಲೇ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರ ಜತೆಗೆ ಮಾತನಾಡಿ ಈಡೇರಿಸಲು ಕ್ರಮ ಕೊಗೊಳ್ಳಲಾಗುವುದು ತಿಳಿಸಿದ್ದಾರೆ.