ಬೆಂಗಳೂರು: ದೇಶದಲ್ಲಿ ಕಳೆದ 9 ವರ್ಷದಿಂದ ಅಧಿಕಾರ ಹಿಡಿದಿರುವ ಬಿಜೆಪಿ ರಾಜ್ಯದಲ್ಲೂ ಕಳೆದ ಬಾರಿ ಅಧಿಕಾರ ಅನುಭವಿಸಿದೆ. ಆದರೆ, ಇಂದಿನ ಸ್ಥಿತಿ ನೋಡಿದರೆ ಅಯ್ಯೋಪಾಪ ಎನಿಸುತ್ತಿದೆ.
ಹೌದು! ಈ ಬಾರಿ ಬಿಜೆಪಯನ್ನು ಸರಿಸಿ ಅಧಿಕಾರವನ್ನು ನಾಡಿನ ಜನ ಕಾಂಗ್ರೆಸ್‌ಗೆ ಕೊಟ್ಟಿದ್ದಾರೆ. ಅಂದರೆ ಇವರನ್ನು ವಿಪಕ್ಷ ಸ್ಥಾನದಲ್ಲಿ ನೋಡಲು ಜನ ಇಚ್ಛೆಪಟ್ಟಿದ್ದಾರೆ. ಆದರೆ, ಈವರೆಗೂ ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ಮುಖಂಡರು ತಮ್ಮ ಪಕ್ಷದಲ್ಲಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ಕೂರಿಸುವುದಕ್ಕೆ ಇನ್ನು ಸಾಧ್ಯವಾಗಿಲ್ಲ.
ಈ ಎಲ್ಲದರ ನಡುವೆಯೇ ಈಗಾಗಲೇ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಜಂಟಿ ಅಧಿವೇಶನ ಉದ್ದೇಶಿಸಿ ನಿನ್ನೆ (ಜು.3) ರಾಜ್ಯ ಪಾಲರು ಕೂಡ ಭಾಷಣ ಮಾಡಿದ್ದಾರೆ. ಆದರೆ, ಅಧಿವೇಶನ ಆರಂಭವಾಗಿದ್ದರೂ ಬಿಜೆಪಿಯಲ್ಲಿ ವಿಪಕ್ಷ ನಾಯಕ ಯಾರು ಎನ್ನುವುದೇ ಇನ್ನೂ ನಿಗೂಢವಾಗಿದೆ. ಇದು ಬಿಜೆಪಿಗೆ ತೀವ್ರ ಇರಿಸುಮುರಿಸು ಉಂಟುಮಾಡಿದೆ ಎನ್ನದೆ ಬೇರೆ ಪದವಿಲ್ಲ ಎನ್ನಬಹುದಾಗಿದೆ.
ಅಧಿವೇಶದನದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ಅನ್ನು ಇಕ್ಕಟ್ಟಿನಲ್ಲಿ ಸಿಲುಕಿಸಬೇಕಾದ ಬಿಜೆಪಿಯೇ ಈಗ ಸಂಕಷ್ಟಕ್ಕೆ ಸಿಲುಕಿದ್ದು, ಈ ಜಂಜಾಟದ ನಡುವೆಯೂ ಇಂದು (ಜು.4) ವಿಪಕ್ಷದ ನಾಯಕನ ಆಯ್ಕೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಆದರೆ, ಯಾರಿಗೆ ವಿಪಕ್ಷ ನಾಯಕನ ಪಟ್ಟ ಕಟ್ಟಲಾಗುತ್ತದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.
ಇನ್ನು ಹೈಕಮಾಂಡ್ ವಿಪಕ್ಷ ನಾಯಕನ ಆಯ್ಕೆ ಮಾಡಲು ವೀಕ್ಷಕರನ್ನು ನೇಮಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಆಯ್ಕೆ ಮಾಡಲು ಕೇಂದ್ರೀಯ ವೀಕ್ಷಕರಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರನ್ನು ನೇಮಿಸಿದ್ದಾರೆ.
ವೀಕ್ಷಕರು ಈಗಾಗಲೇ ಬೆಂಗಳೂರಿಗೆ ಬಂದಿದ್ದು, ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಹೈಕಮಾಂಡ್ಗೆ ಮಾಹಿತಿ ನೀಡಲಿದ್ದಾರೆ. ಬಳಿಕ ಅಧಿಕೃತವಾಗಿ ವಿಪಕ್ಷ ನಾಯಕನ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.
ರೇಸ್ನಲ್ಲಿರುವ ಕೇಸರಿ ಕಲಿಗಳು: ಮೂಲಗಳ ಪ್ರಕಾರ ಬಿಜೆಪಿ ಹೈಕಮಾಂಡ್, ವಿಪಕ್ಷ ನಾಯಕನ ಸ್ಥಾನಕ್ಕೆ ಲಿಂಗಾಯತ, ಲಿಂಗಾಯತೇತರ ನಾಯಕರನ್ನು ನೇಮಿಸಿದರೆ ಹೇಗೆ ಎನ್ನುವ ಲೆಕ್ಕಾಚಾರಗಳನ್ನು ಹಾಕಿದೆ.
ಲಿಂಗಾಯತ ಸಮುದಾಯದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ರೇಸ್ನಲ್ಲಿದ್ದಾರೆ. ಅಲ್ಲದೇ ಶಾಸಕ ಸುನಿಕ್ ಕುಮಾರ್ ಕೂಡ ವಿಪಕ್ಷ ನಾಯಕನ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಯಾರಿಗೆ ವಿಪಕ್ಷ ನಾಯಕನ ಪಟ್ಟ ಎನ್ನುವುದು ಇನ್ನೂ ನಿಗೂಢವಾಗಿದೆ.