ನ್ಯೂಡೆಲ್ಲಿ: ದೆಹಲಿ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರ ಪತ್ನಿ ಸೀಮಾ ಸಿಸೋಡಿಯಾಗೆ ಸೇರಿದ ಒಟ್ಟು 52 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದ್ದು, ಈ ಮೂಲಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಸಿಸೋಡಿಯಾಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ.
ದೆಹಲಿ ಅಬಕಾರಿ ಪಾಲಿಸಿ ಹಗರಣದಲ್ಲಿ ಸಿಸೋಡಿಯಾರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಕೆಳ ನ್ಯಾಯಾಲಯದಲ್ಲಿ ಜಾಮೀನು ಸಿಗದಿದ್ದಕ್ಕೆ ಸಿಸೋಡಿಯಾ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದ ಬೆನ್ನಲ್ಲೇ, 52 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಇನ್ನು ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಯಲ್ಲಿ ಸಿಸೋಡಿಯಾ ಪತ್ನಿಗೆ ಸೇರಿದ ಎರಡು ಪ್ರಾಪರ್ಟಿಗಳು ಹಾಗೂ ಸಂಬಂಧಿ ರಾಜೇಶ್ ಜೋಶಿ ಮತ್ತು ಗೌತಮ್ ಮಲ್ಹೋತ್ರಾಗೆ ಸೇರಿದ ಆಸ್ತಿಗಳನ್ನು ಪಿಎಂಎಲ್ ಕಾಯ್ದೆ ಅಡಿಯಲ್ಲಿ (Prevention of Money Laundering Act) ಮುಟ್ಟುಗೋಲು ಹಾಕಿಕೊಂಡಿದೆ.
ಇಡಿ ಅಧಿಕಾರಿಗಳ ಪ್ರಕಾರ, ಮನೀಸ್ ಸಿಸೋಡಿಯಾ ಬ್ಯಾಂಕ್ ಬ್ಯಾಲೆನ್ಸ್ 11.49 ಲಕ್ಷ ರೂ. ಇದೆ. ಅವರಿಗೆ ಸೇರಿದ ಬ್ರೈಂಡ್ಕೋ ಸೇಲ್ಸ್ ಪ್ರೈವೆಟ್ ಲಿಮಿಟೆಡ್ನ ಒಟ್ಟು ಆಸ್ತಿ 16.45 ಕೋಟಿ ಎಂದು ತಿಳಿಸಿದೆ.
Delhi Excise Policy 2021-22 ಹಗರಣದಲ್ಲಿ ಸಿಸೋಡಿಯಾ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಸಿಸೋಡಿಯಾರನ್ನು ಸಿಬಿಐ ಅಧಿಕಾರಿಗಳು ಹಲವು ಬಾರಿ ವಿಚಾರಣೆ ನಡೆಸಿ ಫೆಬ್ರವರಿ 26 ರಂದು ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಬಂಧಿಸಿದ್ದಾರೆ. ಸದ್ಯ ಅವರು ಸಿಬಿಐ ಮತ್ತು ಇಡಿ ಅಧಿಕಾರಿಗಳಿಂದ ತನಿಖೆ ಎದುರಿಸುತ್ತಿದ್ದಾರೆ.