ಬೆಂಗಳೂರು: ಹಾಸನ- ಬೆಂಗಳೂರು ಮಾರ್ಗದಲ್ಲಿ ಓಡಾಡುವ ಬಿಎಂಟಿಸಿ ನೌಕರರಿಗೆ ತಡೆರಹಿತ ಬಸ್‌ಗಳಲ್ಲಿ ಓಡಾಡುವುದಕ್ಕೆ ಅವಕಾಶವಿಲ್ಲ ಎಂದು ಮತ್ತೊಬ್ಬ ನೌಕರರನೇ ತನ್ನ ಸಹೋದ್ಯೋಗಿಯನ್ನು ಕೆಳಗಿಳಿಸಿದ ಘಟನೆ ನಡೆದಿದೆ.
ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಕೆಲ ನೌಕರರಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬ ನೌಕರನಿಗೆ ಆಗುವುದಿಲ್ಲ. ಇದರಿಂದ ನೌಕರರ ನಡುವೆಯೇ ತಿಕ್ಕಾಟ ಉಂಟಾಗುತ್ತಿದೆ.
ನಿಮ್ಮನ್ನು ನೀವೆ ಹೀಯಾಳಿಸಿಕೊಂಡು ನಿಮ್ಮ ಸಹೋದ್ಯೋಗಿಯನ್ನೇ ಕೆಳಗಿಳಿಸಿದರೆ ಅದು ನಿಮಗೆ ಸರಿ ಎನಿಸುತ್ತದೆಯೇ. ಏಕೆ ಹೀಗೆ ಮಾಡುತ್ತೀರಿ. ಇನ್ನಾದರೂ ನಿಮ್ಮವರನ್ನು ನೀವು ಗೌರವಿಸುವುದನ್ನು ಕಲಿಯಿರಿ ಎಂದು ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ಸಲಹೆ ನೀಡಿದ್ದಾರೆ.
ಸಾರ್ವಜನಿಕವಾಗಿ ಬಸ್‌ನಲ್ಲೇ ಮತ್ತೊಬ್ಬ ನೌಕರನನ್ನು ಏಕವಚನದಲ್ಲಿ ಕರೆದು ಕೆಳಗಿಳಿಯಪ್ಪ ಎಂದು ಹೇಳುವುದರಿಂದ ಸಾಮಾನ್ಯ ಜನರಿಗೆ ನಿಮ್ಮ ಬಗ್ಗೆ ಏನು ಸಂದೇಶ ಹೋಗುತ್ತದೆ, ನಿಮ್ಮನ್ನು ಯಾವ ರೀತಿ ನೋಡುತ್ತಾರೆ ಎಂಬುವುದರ ಪರಿಜ್ಞಾನ ಬೇಡವೇ. ಇನ್ನಾದರೂ ಇದನ್ನು ಬಿಡಿ ಸಹೋದ್ಯೋಗಿಗಳನ್ನು ಗೌರವಿಸುವುದನ್ನು ಕಲಿಯಿರಿ ಎಂದು ತಿಳಿಸಿದ್ದಾರೆ.
ನೀವು ಒಗ್ಗಟ್ಟಾಗಿಲ್ಲದೆ ಇರುವುದರಿಂದ ನಿಮಗೆ ಸರಿಯಾದ ಸೌಲಭ್ಯ ಪಡೆಯುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಯೋಚನೆ ಮಾಡುವ ತಾಳ್ಮೆಯೂ ಇಲ್ಲ ಎಂದರೆ ನಿಮಗೆ ಏನು ಹೇಳಬೇಕು ಎಂದು ಹೇಳಿದ್ದಾರೆ.
ಹಾಸನ ನೌಕರರೊಬ್ಬರ ಹೇಳಿಕೆ: ನಾನು ಕೂಡ ನಾನ್‌ಸ್ಟಾಪ್ ಹಾಸನ – ಬೆಂಗಳೂರು ನಡುವೆ ಕೆಲಸ ಮಾಡಿದ್ದೇನೆ. ನಾನು ಬಿಎಂಟಿಸಿಯ ನಮ್ಮ ಸಹೋದ್ಯೋಗಿಗಳನ್ನು ನಾಲ್ಕರಿಂದ ಐದು ಜನ ಪ್ರತಿ ಟ್ರಿಪ್ಪಿನಲ್ಲೂ ಕರೆದುಕೊಂಡು ಬಂದಿದ್ದೇನೆ. ಬಿಎಂಟಿಸಿ ಸಿಬ್ಬಂದಿಗಳು ಮೆಜೆಸ್ಟಿಕ್ ಇಂದ ಹೆಚ್ಚು ಕಮ್ಮಿ ಜಾಲಹಳ್ಳಿ ಕ್ರಾಸ್ ವರೆಗೂ ಒಬ್ಬರಿಗೊಬ್ಬರಿಗೆ ಫೋನ್ ಮುಖಾಂತರ ಮಾತನಾಡಿಕೊಂಡು ಹತ್ತರಿಂದ 20 ಜನ ಹಾಸನ ಬೆಂಗಳೂರಿಗೆ ಓಡಾಡುತ್ತಿದ್ದಾರೆ.
ಇದರಿಂದ ದಾರಿ ಮಧ್ಯದಲ್ಲಿ ಚಾಲಕ -ನಿರ್ವಾಹಕರು ಮತ್ತು ಬಿಎಂಟಿಸಿ ಸಹೋದ್ಯೋಗಿಗಳ ನಡುವೆಯೂ ಜಗಳವಾಗುತ್ತಿತ್ತು. ಅದನ್ನ ಸಂಬಂಧಪಟ್ಟ ಹಾಸನ ವಿಭಾಗೀಯ ನಿಯಂತ್ರಣಧಿಕಾರಿಗಳ ಗಮನಕ್ಕೆ ಬಂದಿತ್ತು.
ಬಳಿಕ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಾಗ ಬಿಎಂಟಿಸಿ ಸಿಬ್ಬಂದಿಗಳನ್ನು ಹಾಸನ ಬೆಂಗಳೂರು ನಾನ್ ಸ್ಟಾಪ್ ಗಾಡಿಯ ಬದಲು ಹಾಸನ – ಬೆಂಗಳೂರು – ಚಿಕ್ಕಮಂಗಳೂರು ಇನ್ನಿತರ ಮಾರ್ಗಗಳಲ್ಲಿ ಲಿಮಿಟೆಡ್ ಸ್ಟಾಪ್ ಬಸ್ಸುಗಳಲ್ಲಿ ಬರಲು ಸೂಚಿಸಿದ್ದಾರೆ.
ಇದರಿಂದ ನಾನ್‌ಸ್ಟಾಪ್ ಬಸ್‌ಗಳಲ್ಲಿ ಇತರ ನೌಕರರನ್ನು ಹತ್ತಿಸಿಕೊಂಡು ಹೋಗುವುದಕ್ಕೆ ಹೆದರುತ್ತಿದ್ದಾರೆ ಎಂದು ಹಾಸನ ವಿಭಾಗದ ನೌಕರರೊಬ್ಬರು ವಿಜಯಪಥಕ್ಕೆ ಮಾಹಿತಿ ನೀಡಿದ್ದಾರೆ.