ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಯಾಗಿದ್ದು ಈಗಾಗಲೇ ಕೋಟಿಕೋಟಿ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಅಲ್ಲದೆ ಈಗಲೂ ಪಡೆದುಕೊಳ್ಳುತ್ತಿದ್ದಾರೆ.
ಆದರೆ, ಈ ಶಕ್ತಿ ಯೋಜನೆ ಸಾರಿಗೆ ನಿಗಮಗಳ ಕೆಲ ನೌಕರರಿಂದ ದುರ್ಬಳಕೆ ಆಗುತ್ತಿದೆ ಎಂಬ ಬಗ್ಗೆ ಅನುಮಾನ ಮೂಡಿಸಿದೆ. ಹೀಗಾಗಿ ದುರ್ಬಳಕೆ ತಡೆಯಲು ಮುಂದಾಗಿರುವ ಸಾರಿಗೆ ನಿಗಮ ತನಿಖಾಧಿಕಾರಿಗಳಿಗೆ ಟಿಕೆಟ್ ತಪಾಸಣೆ ವೇಳೆ ಯಾವರೀತಿಯ ಮಾನದಂಡಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಸಿದೆ.
ಅದರಂತೆ ನಾಲ್ಕೂ ನಿಗಮಗಳಲ್ಲೂ ನೌಕರರು ಎಸಗುವ ಅಪರಾಧಗಳಿಗೆ ಯಾವ್ಯಾವ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯೊಂದಿಗೆ ಸುತ್ತೋಲೆಯನ್ನು ಹೊರಡಿಸಿದೆ.
ಸಾರಿಗೆ ಸಿಬ್ಬಂದಿ ಪ್ರಯಾಣಿಕರ ಸಂಖ್ಯೆಯಲ್ಲಿ ಗೋಲ್ಮಾಲ್ ಮಾಡುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಠಿಣ ಕ್ರಮದ ಎಚ್ಚರಿಕೆಯನ್ನು ನಿಗಮದ ಅಧಿಕಾರಿಗಳು ಕೊಟ್ಟಿದ್ದಾರೆ.
ಯೋಜನೆ ಜಾರಿಯಾದಾಗಿನಿಂದಲೂ ನಿರೀಕ್ಷೆಗೂ ಮೀರಿ ಮಹಿಳಾ ಪ್ರಯಾಣಿಕರು ಹೆಚ್ಚಾಗಿ ಓಡಾಟ ಮಾಡುತ್ತಿದ್ದು 18 ದಿನದಲ್ಲೇ 339 ಕೋಟಿ ರೂ. ಮೊತ್ತದ ಟಿಕೆಟ್ಗಳನ್ನು ಮಹಿಳಾ ಪ್ರಯಾಣಿಕರಿಗೆ ನೀಡಲಾಗಿದೆ. ಇದು ಉತ್ತಮ ಬೆಳವಣಿಗೆಯೇ ಆಗಿದೆ. ಆದರೆ ಇದರ ದುರುಪಯೋಗ ತಡೆಗಟ್ಟುವ ಸಲುವಾಗಿ ನಿಗಮವು ಸುತ್ತೋಲೆಯೊಂದನ್ನು ಹೊರಡಿಸಿದೆ.
ಇದನ್ನು ಗಮನಿಸಿದರೆ ಶಕ್ತಿ ಯೋಜನೆ ಹೆಸರಲ್ಲಿ ಪ್ರಯಾಣಿಕರಿಗಿಂತ ಹೆಚ್ಚಿನ ಟಿಕೆಟ್ ನೀಡಲಾಗುತ್ತಿದೆಯಾ ಎನ್ನುವ ಅನುಮಾನ ಮೂಡುವಂತೆ ಮಾಡಿದೆ. ಹೀಗಾಗಿ ಇದರಲ್ಲಿ ಪ್ರಮುಖವಾಗಿ ಬಸ್ಸಿನಲ್ಲಿ ವಾಸ್ತವ ಮಹಿಳಾ ಪ್ರಯಾಣಿಕರ ಸಂಖ್ಯೆಗಿಂತ ಹೆಚ್ಚಿನ ಟಿಕೆಟ್ ವಿತರಣೆ ಮಾಡಿರಬಾರದು.
ಒಂದ ವೇಳೆ ನಿರ್ವಾಹಕರು ಹೆಚ್ಚಿನ ಟಿಕೆಟ್ ನೀಡಿರುವುದು ಕಂಡು ಬಂದರೆ ಗಂಭೀರ ಪ್ರಕರಣವೆಂದು ಅದನ್ನು ಪರಿಗಣಿಸಿ ಆ ನಿರ್ವಾಹಕರಿಗೆ ತಕ್ಕ ಶಿಕ್ಷೆಯನ್ನು ನೀಡಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ. ವಾಸ್ತವ ಪ್ರಯಾಣಿಕರ ಸಂಖ್ಯೆಗಿಂತ ಹೆಚ್ಚಿನ ಟಿಕೆಟ್ ನೀಡಿದ್ದರೆ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಅಪರಾಧಕ್ಕೆ ಯಾವ್ಯಾವ ಕ್ರಮ?: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ಮಹಿಳಾ ಪ್ರಯಾಣಿಕರ ವಾಸ್ತವ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಮಹಿಳಾ ಪ್ರಯಾಣಿಕರ ಚೀಟಿಯನ್ನು ನಿರ್ವಾಹಕರು ವಿತರಿಸಿರುವುದು. ಕಂಡು ಬಂದಲ್ಲಿ ಆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಿರ್ವಾಹಕರ ವಿರುದ್ಧ ಸಾಮಾನ್ಯ ನಗರ ಸಾರಿಗೆಗಳಲ್ಲಿ ಗಂಭೀರ ಪ್ರಕರಣವೆಂದು ಹಾಗೂ ವೇಗದೂತ ಸಾರಿಗೆಗಳಲ್ಲಿ ಅತಿ ಗಂಭೀರ ಪ್ರಕರಣ ಎಂದು ದಾಖಲಿಸಬೇಕು.
ಬಸ್ಸುಗಳಲ್ಲಿ ಪ್ರಯಾಣಿಸುವ ಕರ್ನಾಟಕ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ನಿರ್ವಾಹಕರು ಉಚಿತ ಟಿಕೇಟ್ ವಿತರಿಸದೇ ಇದ್ದ ಪಕ್ಷದಲ್ಲಿ ಪ್ರಯಾಣಿಕರಿಂದ ದಂಡ ವಸೂಲು ಮಾಡದೇ ನ್ಯೂನತೆಗಳ ವಿವರಗಳೊಂದಿಗೆ ನಿರ್ವಾಹಕರಿಗೆ ನಿಯಮಾನುಸಾರ ಮೆಮೋ ನೀಡಬೇಕು.
ಸಾಮಾನ್ಯ/ ನಗರ ಸಾರಿಗೆ/ ವೇಗದೂತ ಸಾರಿಗೆಗಳಲ್ಲದೆ ಬೇರೆ ಪ್ರತಿಷ್ಠಿತ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಟಿಕೇಟ್ ನೀಡಿರುವ ಅಥವಾ ಪಿಂಕ್ ಚೀಟಿ ನೀಡಿರುವುದು ಕಂಡುಬಂದಲ್ಲಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡದೇ ನ್ಯೂನತೆಗಳ ವಿವರಗಳೊಂದಿಗೆ ನಿರ್ವಾಹಕರಿಗೆ ನಿಯಮಾನುಸಾರ ಮೆಮೋ ನೀಡಬೇಕು.
ಇನ್ನು ಪುರುಷ ಪ್ರಯಾಣಿಕರಿಗೆ ಮಹಿಳಾ ಪ್ರಯಾಣಿಕ ಉಚಿತ ಟಿಕೆಟ್ ವಿತರಿಸಿದಲ್ಲಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡದೇ ನ್ಯೂನತೆಗಳ ವಿವರಗಳೊಂದಿಗೆ ನಿರ್ವಾಹಕರಿಗೆ ನಿಯಮಾನುಸಾರ ಮೆಮೋ ನೀಡಬೇಕು.
ಕೊನೆಯ ಮತ್ತ ಐದನೆಯದಾಗಿ ಬೇರೆ ರಾಜ್ಯದ ಮಹಿಳೆಯರಿಗೆ ಮಹಿಳಾ ಪ್ರಯಾಣಿಕ ಉಚಿತ ಟಿಕೆಟ್ ವಿತರಿಸಿದಲ್ಲಿ ಪ್ರಯಾಣಿಕರಿಂದ ದಂಡ ವಸೂಲಿ ಮಾಡದೇ ನ್ಯೂನತೆಗಳ ವಿವರಗಳೊಂದಿಗೆ ನಿರ್ವಾಹಕರಿಗೆ ನಿಯಮಾನುಸಾರ ಮೆಮೋ ನೀಡಬೇಕು ಎಂದು ಸುತ್ತೋಲೆಯಲ್ಲಿ ನಿರ್ವಾಹಕರಿಗೆ ಎಚ್ಚರಿಕೆ ಕೊಟ್ಟಿದ್ದು ತನಿಖಾಧಿಕಾರಿಗಳು ಈ ಕ್ರಮವನ್ನು ಜರುಗಿಸಬೇಕು ಎಂದು ಸೂಚನೆ ನೀಡಲಾಗಿದೆ.