ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಾರಿಗೆ ನಿಗಮಗಳ ಉದ್ಯೋಗಿಗಳ ವೇತನ ಇತ್ಯಾದಿ ಸೌಲಭ್ಯಗಳನ್ನು ಸರ್ಕಾರಿ ನೌಕರರಿಗೆ ಸಮಾನಾಂತರವಾದ ಹುದ್ದೆಗಳ ವೇತನಗಳಿಗೆ ಅನುಗುಣವಾಗಿ, ಆಯಾ ನಿಗಮಗಳ ಆಯವ್ಯಯಗಳ ಪತ್ರಗಳಲ್ಲಿ ಅಡಕವಾಗುವಂತೆ ಕಾರ್ಯಕ್ರಮ ರಚನೆ ಮಾಡಲಾಗುವುದು ಎಂದು ತಿಳಿಸಿತ್ತು.
ಆದರೆ, ನಿನ್ನೆ ( ಜು.10 ಸೋಮವಾರ) ವಿಧಾನಸಭೆ ಅಧಿವೇಶನದಲ್ಲಿ ಉಲ್ಟಾ ಹೊಡೆದಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಿಗೆ ಸರಿ ಸಮಾನವಾದ ವೇತನ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವ ರಾಮಲಿಂಗಾರೆಡ್ಡಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಅಂದರೆ ಅಧಿಕಾರಕ್ಕೆ ಬರುವ ಮುನ್ನ ನೌಕರರ ಸಂಘಟನೆಗಳಿಗೆ ಕೊಟ್ಟ ಭರವಸೆಯನ್ನೇ ಮರೆಯುವ ಇಂಥ ಪಕ್ಷಗಳಿಂದ ಜನರು ನಿರೀಕ್ಷೆ ಪಡುವಂತ ಆಡಳಿತ ಬಯಸಲು ಸಾಧ್ಯವೆ ಎಂಬ ಪ್ರಶ್ನೆ ಈಗ ಮೂಡುತ್ತಿದ್ದೆ. ತಾವೆ ಕೊಟ್ಟ ಭರವಸೆಯನ್ನೇ ಅಧಿಕಾರಕ್ಕೆ ಬಂದ ಮೇಲೆ ಇಲ್ಲ ಎಂದು ಹೇಳುವ ಇಂಥ ಪಕ್ಷಗಳು ನಮ್ಮನ್ನು ಆಳುತ್ತಿರುವುದು ದುರಂತವೇ ಸರಿ.
ನೋಡಿ ರಾಜ್ಯದ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳುವ ಮೂಲಕ ಸಾರಿಗೆ ನೌಕರರ ಆಸೆಗೆ ತಣ್ಣೀರು ಎರಚಿ ನಾವು ಚುನಾವಣೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅದಲ್ಲ ಎಂಬ ಹಸಿ ಸುಳ್ಳನ್ನು ಈಗ ಹೇಳುತ್ತಿದೆ ಈ ಕಾಂಗ್ರೆಸ್ ಪಕ್ಷ.
ಈ ಮೂಲಕ ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಸರ್ಕಾರಿ ನೌಕರರಿಗೆ ನೀಡಲಾಗುವ ಎಲ್ಲ ಸವಲತ್ತುಗಳನ್ನು ಒದಗಿಸಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಕಳೆದ 2020ರಿಂದಲೂ ಒತ್ತಾಯಿಸಿಕೊಂಡೇ ಬಂದಿದ್ದರು. ನೂತನ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬಹುದೆಂಬ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅವರಿಗೆ ಈಗ ನಿರಾಸೆಯುಂಟು ಮಾಡಿದೆ ಈ ಕಾಂಗ್ರೆಸ್ ಸರ್ಕಾರ.
2020ರ ಡಿಸೆಂಬರ್‌ನಲ್ಲಿ ಮೊದಲಿಗೆ ಸಾರಿಗೆ ನಿಗಮಗಳ ನೌಕರರು ಇದೇ ಬೇಡಿಕೆಯನ್ನು ಮುಂದಿಷ್ಟುಕೊಂಡು ಬೃಹತ್ ಪ್ರತಿಭಟನೆ ನಡೆಸಿದ್ದರು. ಸಾರಿಗೆ ನೌಕರರಿಗೆ 6ನೇ ವೇತನ ಆಯೋಗಕ್ಕೆ ಸಮನಾದ ವೇತನ ನೀಡಲು ಸರಕಾರ ಸಿದ್ಧ ಆದರೆ ಅವರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಆಗಿನ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದರು.
ಈ ಸಂದರ್ಭದಲ್ಲಿ ನೌಕರರ ಪ್ರತಿಭಟನೆಗೆ ಬೆಂಬಲ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಆಗಿನ ವಿಪಕ್ಷ ನಾಯಕ ಸಿದ್ದರಾಮಯ್ಯ ನೌಕರರ ಬೇಡಿಕೆ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದರು. ಆದರೆ ಈಗ ತಮ್ಮದೆ ಆದ ಸರ್ಕಾರ ಬಂದು ತಾವೇ ಅಧಿಕಾರದಲ್ಲಿ ಇದ್ದರೂ ಕೂಡ ನೌಕರರು ಇಟ್ಟಿರುವ ಬೇಡಿಕೆಯನ್ನು ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಿರುವುದನ್ನೂ ಕೂಡ ಈಡೇರಿಸುವತ್ತ ಈ ಚಿಂತನೆ ನಡೆಸಿಲ್ಲ. ಅಂದರೆ ನಾವು ವಿಪಕ್ಷದಲ್ಲಿ ಇದ್ದಾಗ ಮಾತ್ರ ನಮ್ಮ ಪರ ಅಧಿಕಾರ ಸಿಕ್ಕಮೇಲೆ ನೀವ್ಯಾರು ಎಂಬಂತೆ ನಡೆದುಕೊಳ್ಳಲು ಈ ಸರ್ಕಾರ ಹೊರಟಿದೆ.
ಅಪ್ಪಾಜಿ ಸಿ.ಎಸ್.ನಾಡಗೌಡ ಕೇಳಿದ್ದು: ಸೋಮವಾರ ವಿಧಾನಸಭೆಯಲ್ಲಿ ಶಾಸಕ ಅಪ್ಪಾಜಿ ಸಿ.ಎಸ್.ನಾಡಗೌಡ ಅವರು ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಣಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೆ ಎಂದು ಕೇಳಿದರು. ಅದಕ್ಕೆ ಅಂಥ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವರ ರಾಮಲಿಂಗಾರೆಡ್ಡಿ ಅವರು ಉತ್ತರ ನೀಡಿದ್ದಾರೆ.
ಇನ್ನು ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಇತರೆ ಎಲ್ಲ ಸೌಲಭ್ಯಗಳನ್ನು ನೀಡಲು ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಳಲಾದ ಮತ್ತೊಂದು ಪ್ರಶ್ನೆಗೆ ವಿವರವಾಗಿ ಲಿಖಿತ ಉತ್ತರ ನೀಡಿರುವ ಸಚಿವರು, ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಸ್ತೆ ಸಾರಿಗೆ ನಿಗಮಗಳ ಕಾಯ್ದೆ-1950ರಡಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆ ಆಗಿರುತ್ತವೆ.
ರಸ್ತೆ ಸಾರಿಗೆ ನಿಗಮಗಳ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನ ಹಾಗೂ ಎಲ್ಲ ಆರ್ಥಿಕ ಸೌಲಭ್ಯಗಳನ್ನು ನಿಗಮಗಳು ಆಂತರಿಕ ಮೂಲಗಳಿಂದಲೇ ಭರಿಸಬೇಕಿದೆ. ಆದ್ದರಿಂದ, ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಮತ್ತು ವೇತನವನ್ನು ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಶ್ರೇಣಿ ಮತ್ತು ವೇತನಕ್ಕೆ ಹೋಲಿಸಲು ಬರುವುದಿಲ್ಲ ಎಂದಿದ್ದಾರೆ.
ಇನ್ನು ಸಾರಿಗೆ ಸಂಸ್ಥೆಗಳ ನೌಕರರು 31/12/2019 ರಂದು ಪಡೆಯುತ್ತಿದ್ದ ಮೂಲ ವೇತನಕ್ಕೆ ಶೇ.15ರಷ್ಟು ಸೇರಿಸಿ 01.03.2023ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಣೆ ಮಾಡಲಾಗಿದೆ. ಅಲ್ಲದೇ, ಸಾರಿಗೆ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ, ವೇತನ ಬಡ್ತಿಗಳನ್ನು ಮತ್ತು ಇತರೆ ವೇತನ ಭತ್ಯೆಗಳಾದ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ಪ್ರಭಾರ ಕಾರ್ಯ ಭತ್ಯೆ, ಅಧಿಕಾವಧಿ ಭತ್ಯೆ, ವಾಷಿಂಗ್ ಭತ್ಯೆ, ಬಾಟಾ, ಇನ್ಸೆಂಟಿವ್, ರಾತ್ರಿ ಭತ್ಯೆ, ರಜೆ ಭತ್ಯೆ, ಪ್ರವಾಸ ಭತ್ಯೆ, ನಗರ ಪರಿಹಾರ ಭತ್ಯೆ ಕನ್ವಿಯನ್ಸ್ ಭತ್ಯೆ, ಶಿಶುಪಾಲನಾ ಭತ್ಯೆ, ಬೆಳ್ಳಿ & ಬಂಗಾರ ಪದಕ ಭತ್ಯೆ, ವಾಹನ ಭತ್ಯೆ, ದಿನ ಪತ್ರಿಕೆ ಭತ್ಯೆ ಪರಿಚಾರಕ ಭತ್ಯೆ, ಹಾರ್ಡ್‌ಶಿಪ್ ಭತ್ಯೆ ಮುಂತಾದವುಗಳನ್ನು ಪಾವತಿಸಲಾಗುತ್ತಿದೆ ಎಂದು ಸಚಿವ ರಾಮಲಿಂಗರೆಡ್ಡಿ ವಿವರಿಸಿದ್ದಾರೆ.
ಅರ್ಹ ಸಿಬ್ಬಂದಿಗಳಿಗೆ ಮುಂಬಡ್ತಿ ಆಯ್ಕೆ ಶ್ರೇಣಿ, ಉನ್ನತ ಶ್ರೇಣಿ, ಗಳಿಕೆ ರಜೆ ನಗದಿಕರಣ, ವಿಶೇಷ ವೇತನ ಬಡ್ತಿ, ವಿಶೇಷ ರಜೆಗಳು ಹಾಗೂ ಇತರೆ ಸೌಲಭ್ಯಗಳನ್ನು ನಿಯಮಾನುಸಾರ ಕಾಲಕಾಲಕ್ಕೆ ನೀಡಲಾಗುತ್ತಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾರಿಗೆ ನಿಗಮಗಳ ಉದ್ಯೋಗಿಗಳ ವೇತನ ಇತ್ಯಾದಿ ಸೌಲಭ್ಯಗಳನ್ನು ಸರ್ಕಾರಿ ನೌಕರರಿಗೆ ಸಮಾನಾಂತರವಾದ ಹುದ್ದೆಗಳ ವೇತನಗಳಿಗೆ ಅನುಗುಣವಾಗಿ ನೀಡುವ ಬಗ್ಗೆ ಕಾರ್ಯಕ್ರಮ ರಚನೆ ಮಾಡಲಾಗುವುದು ಎಂದು ಹೇಳಿದನ್ನೇ ಇಲ್ಲಿ ಮರೆತಿದೆ. ಇದಕ್ಕೆ ಸಂಘಟನೆಗಳು ಮತ್ತು ನೌಕರರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಇನ್ನಷ್ಟೆ ಕಾದು ನೋಡಬೇಕಿದೆ.