ಪ್ಯಾರಿಸ್: ಎರಡು ದಿನಗಳು ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರಿಗೆ ಫ್ರಾನ್ಸ್ ದೇಶದ ಅತ್ಯುನ್ನತ ಮಿಲಿಟರಿ, ನಾಗರಿಕ ಪ್ರಶಸ್ತಿ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್’ (Grand Cross of the Legion of Honor) ನೀಡಿ ಗುರುವಾರ ಗೌರವಿಸಲಾಗಿದೆ.
ಮೋದಿಯವರಿಗೆ ಅಲ್ಲಿನ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್, ಈ ಗೌರವ ನೀಡಿ ಸನ್ಮಾಸಿದ್ದು ಭಾರತೀಯರು ಹೆಮ್ಮೆ ಪಡುವ ಸಂಗತಿಯಾಗಿದೆ. ರಾಜಧಾನಿ ಪ್ಯಾರಿಸ್ಗೆ ಗುರುವಾರ ಆಗಮಿಸಿದ್ದ ಮೋದಿಗೆ ಕೆಂಪು ಹಾಸಿನ ಸ್ವಾಗತ ಕೋರಲಾಯಿತು.
ಇಂದು ( ಶುಕ್ರವಾರ ಜು.14) ಪ್ರಧಾನಿ ಮೋದಿಯವರು, ಫ್ರಾನ್ಸ್ ಅಧ್ಯಕ್ಷರ ಜತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ, ಜಲಾಂತರ್ಗಾಮಿ ನಿರ್ಮಾಣ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಎರಡು ದೇಶದ ಗಣ್ಯರು ಸಹಿ ಹಾಕುವ ನಿರೀಕ್ಷೆ ಇದೆ.
ಪ್ರಧಾನಿ ಮೋದಿಗೆ ನೀಡಿರುವ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಪ್ರಶಸ್ತಿಯು ಈ ಹಿಂದೆ ನೆಲ್ಸನ್ ಮಂಡೇಲಾ, ಕಿಂಗ್ ಚಾರ್ಲ್ಸ್, ಏಂಜೆಲಾ ಮರ್ಕೆಲ್ ಅವರಿಗೆ ನೀಡಿ ಫ್ರಾನ್ಸ್ ಗೌರವಿಸಿತ್ತು.
ಪ್ಯಾರಿಸ್ನ ಎಲಿಸೀ ಪ್ಯಾಲೇಸ್‌ನಲ್ಲಿ ಆತಿಥ್ಯ ನೀಡಿದ್ದಕ್ಕಾಗಿ ಮೋದಿಯವರು ಫ್ರೆಂಚ್ ಅಧ್ಯಕ್ಷರಿಗೆ ಮತ್ತು ಅವರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರನ್ಗೆ ಧನ್ಯವಾದ ಅರ್ಪಿಸಿದರು.
ಬಳಿಕ ಮೋದಿ ಅವರು ಫ್ರೆಂಚ್ ಪ್ರಧಾನಿ ಎಲಿಸಬೆತ್ ಬೋರ್ನ್ ಮತ್ತು ಫ್ರೆಂಚ್ ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್ರನ್ನು ಭೇಟಿಯಾಗಿ ಉಭಯ ದೇಶಗಳ ನಡುವೆ ಮತ್ತಷ್ಟು ಸಹಕಾರದ ಕುರಿತು ಚರ್ಚೆ ನಡೆಸಿದರು.