ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ನಗರ ಘಟಕ-2ರಲ್ಲಿ ಘಟಕ ವ್ಯವಸ್ಥಾಪಕ ತನಗೆ ವಿನಾಕಾರಣ ಕಿರುಕುಳ ಕೊಡುತ್ತಿದ್ದಾರೆ ಎಂದು ಮನನೊಂದು ಚಾಲಕ ಕಂ ನಿರ್ವಾಹಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಕೆಕೆಆರ್ಟಿಸಿ ನಗರ ಘಟಕ -2ರ ಚಾಲಕ ಕಂ ನಿರ್ವಾಹಕ ಬೀರಣ್ಣ ಎಂಬುವರೆ ಮೈಮೇಲೆ ಡೀಸೆಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದವರು.
ಬೇಕಂತಲೇ ಘಟಕ ವ್ಯವಸ್ಥಾಪಕ ತನಗೆ ಕಿರುಕುಳ ನೀಡುತ್ತಿದ್ದಾರೆ. ಸರಿಯಾಗಿ ಡ್ಯೂಟಿ ಕೊಡುತ್ತಿಲ್ಲ, ಜತೆಗೆ ಡ್ಯೂಟಿ ಮಾಡಲು ಬಿಡುತ್ತಿಲ್ಲ. ಹೆಚ್ಚುವರಿ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಬೀರಣ್ಣ ಆರೋಪಿಸಿದ್ದಾರೆ.
ಇನ್ನು ಈ ಕಿರುಕುಳದಿಂದ ಬೇಸತ್ತು ಘಟಕದಲ್ಲೇ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅದನ್ನು ನೋಡಿದ ಸಹೋದ್ಯೋಗಿಗಳು ಆತನನ್ನು ತಡೆದಿದ್ದಾರೆ. ಇಲ್ಲದಿದ್ದರೆ ಬೀರಣ್ಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
ಕಳೆದ 2021ರ ಏಪ್ರಿಲ್ನಲ್ಲಿ ರಾಜ್ಯದ ನಾಲ್ಕೂ ನಿಗಮಗಳ ನೌಕರರು ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮುಷ್ಕರ ಮಾಡಿದ್ದರು. ಆ ಬಳಿಕ ಹಲವು ನೌಕರರಿಗೆ ಕಿರುಕುಳ ಕೊಡುವುದು ಬಹುತೇಕ ಡಿಪೋಗಳಲ್ಲಿ ಹೆಚ್ಚಾಗಿದೆ.
ಅದನ್ನು ಕೇಳಿದರೆ ಮೇಲಧಿಕಾರಿಗಳಿಗೆ ನಮಗೆ ಎದುರು ಉತ್ತರ ಕೊಟ್ಟ ಎಂದು ಕಾರಣ ಹೇಳಿ ನೌಕರರನ್ನು ಅಮಾನತು ಮಾಡಿಸುವ ಕೆಲಸವು ನಡೆದಯುತ್ತಿದೆ. ಇನ್ನು ಏನು ಬೇಡ ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡು ಹೋಗೋಣ ಎಂದರೆ ಅವರಿಂದ ನಮಗೆ ಲಂಚ ಬರುತ್ತಿಲ್ಲ ಎಂದು ಕಿರುಕುಳ ಕೊಡುವುದು ನಡೆಯುತ್ತಿದೆ.
ಇನ್ನು ಡಿಪೋಗಳಲ್ಲಿ ಚಾಲಕರು ಮತ್ತು ನಿರ್ವಾಹಕರ ಕೆಲ ಸಹೋದ್ಯೋಗಿಗಳೆ ಡಿಪೋ ಮಟ್ಟದ ಅಧಿಕಾರಿಗಳಿಗೆ ಬಕೆಟ್ ಹಿಡಿದುಕೊಂಡು ಲಂಚದ ಬೇಡಿಕೆ ಇಟ್ಟು ವಸೂಲಿ ಮಾಡುತ್ತಾರೆ. ಕೊಡದಿದ್ದರೆ ಈ ರೀತಿಯ ಕಿರುಕುಳಗಳು ನಡೆಯುವುದು ಸಾಮಾನ್ಯ ಎಂಬಂತಾಗಿದೆ. ಹೀಗಾಗಿ ಇದಕ್ಕೆಲ್ಲ ಕಡಿವಾಣ ಬೀಳಬೇಕು ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ.