ಬೆಂಗಳೂರು: ಲಂಚ ಪಡೆಯುತ್ತಿದ್ದ ಭ್ರಷ್ಟ ಸರ್ಕಾರಿ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಫಿಲ್ಮ್ ಸ್ಟೈಲ್ನಲ್ಲಿ 15 ಕಿ.ಮೀ ಚೇಸಿಂಗ್ ಮಾಡಿ ಹಿಡಿರುವ ಘಟನೆ ನೆಲಮಂಗಲ ಬಳಿಯ ಸೊಂಡೇಕೊಪ್ಪದಲ್ಲಿ ನಡೆದಿದೆ.
ಭ್ರಷ್ಟ ಅಂದಿಕಾರಿ ಮಹಂತೇಗೌಡ ಎಂಬುವರೆ ಲೋಕಾಯುಕ್ತದಿಂದ ತಪ್ಪಿಸಿಕೊಂಡು 15 ಕಿ.ಮೀ. ಹೋಗಿದ್ದವರು. ಆದರೂ ಬಿಡದೆ ಅವರನ್ನು ಹಿಂಬಾಳಿಸಿಕೊಂಡು ಹೋಗಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ವಿವರ: ರಂಗದಾಮಯ್ಯ ಎಂಬುವವರು ಕೆ.ಜಿ.ಸರ್ಕಲ್ ಬಳಿಯಿರುವ ತಹಸೀಲ್ದಾರ್ ಕಚೇರಿಯ ಫುಡ್ ಇನ್ಸ್ಪೆಕ್ಟರ್ ಮಹಂತೇಗೌಡ ಬಳಿ ಟ್ರೇಡ್ ಲೈಸೆನ್ಸ್ ಮಾಡಿಸಲು ತೆರಳಿದ್ದರು. ಈ ವೇಳೆ ಅಧಿಕಾರಿ ಒಂದು ಲಕ್ಷ ರೂ. ಲಂಚ ಕೇಳಿದ್ದ. ಮುಂಗಡವಾಗಿ 43 ಸಾವಿರ ರೂ. ಪಡೆಯುತ್ತಿದ್ದ.
ಈ ವೇಳೆ ಲೋಕಾಯುಕ್ತ ತಂಡ ಸ್ಥಳಕ್ಕೆ ತೆರಳಿದೆ. ಹಣ ಪಡೆದ ಅಧಿಕಾರಿ, ಇದು ಲೋಕಾಯುಕ್ತರ ಟ್ರ್ಯಾಪ್ ಎಂದು ತಿಳಿದು ಕೂಡಲೇ ಕಾರಿನಲ್ಲಿ ಎಷ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಲೋಕಾಯುಕ್ತರ ಕೈಗೆ ಸಿಗದೇ ಕಾರಿನಲ್ಲಿ ಸುಮಾರು 15 ಕಿ.ಮೀ. ವರೆಗೆ ತಪ್ಪಿಸಿಕೊಂಡು ಹೋಗಿದ್ದಾನೆ.
ಆದರೆ ಲೋಕಾಯುಕ್ತರು ಫಿಲಂ ಸ್ಟೈಲ್ನಲ್ಲಿ ಚೇಸ್ ಮಾಡಿ ನೆಲಮಂಗಲ ಬಳಿಯ ಸೊಂಡೇಕೊಪ್ಪ ಸಮೀಪ ಭ್ರಷ್ಟ ಅಧಿಕಾರಿಯ ಕಾರಿಗೆ ಮುಂದೆ ಬಂದು ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರು ಅಲ್ಲಿಗೆ ನಿಂತಿದ್ದರಿಂದ ಅಧಿಕಾರಿಯನ್ನು ವಶಕ್ಕೆ ಪಡೆದು ಲೋಕಾಯುಕ್ತರು ವಿಚಾರಣೆ ನಡೆಸುತ್ತಿದ್ದಾರೆ.