ಬೆಂಗಳೂರು: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ ಮಾನಹಾನಿಕರವಾಗಿ ಆಧಾರರಹಿತ ಸುದ್ದಿ ಪ್ರಕಟಿಸಿದ ಪವರ್ ಟಿವಿ ಸುದ್ದಿ ಸಂಸ್ಥೆಗೆ ಸಂಕಷ್ಟ ಎದುರಾಗಿದೆ.
ಆಕ್ಷೇಪಾರ್ಹ ಸುದ್ದಿ ಪ್ರಕಟಿಸಿದ್ದಾರೆ ಎಂಬ ಆರೋಪದ ಮೇರೆಗೆ ಸಲ್ಲಿಸಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು ವಿಚಾರಣೆಗೆ ಎತ್ತಿಕೊಂಡ ಬೆಂಗಳೂರಿನ ನ್ಯಾಯಾಲಯ, ಪವರ್ ಟಿವಿ ಮುಖ್ಯಸ್ಥರು, ನಿರೂಪಕ ಚಂದನ್ ಶರ್ಮಾ ಮತ್ತಿತರರ ವಿರುದ್ದ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ನ ನ್ಯಾಯಾಧೀಶರಾದ ಬಿ.ಸಿ. ಚಂದ್ರಶೇಖರ್, ಆರೋಪಿಗಳಾದ ಪವರ್ ಟಿವಿ ಎಂಡಿ ರಾಕೇಶ್ ಸಂಜೀವ ಶೆಟ್ಟಿ, ಡಿ.ಎಲ್. ಮಧು ಹಾಗೂ ಚಂದನ್ ಶರ್ಮಾ ಅವರಿಗೆ ಸಮನ್ಸ್ ಜಾರಿಗೊಳಿಸಿದೆ.
2021ರ ಏಪ್ರಿಲ್ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದ ವೇಳೆ ಆ ಮುಷ್ಕರವನ್ನು ನಿಲ್ಲಿಸಲು ಹಾಗೂ ರೈತರ ಹೋರಾಟ ಮುಕ್ತಾಯಗೊಳಿಸಲು ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೋಟ್ಯಂತರ ರೂ. ಕೇಳಿದ್ದರು ಎಂದು ಆರೋಪಿಸಿ ವರದಿ ಮಾಡಲಾಗಿತ್ತು.
ದೂರನ್ನು ಪರಾಮರ್ಶೆಗೆ ಒಳಪಡಿಸಿದ ನ್ಯಾಯಾಲಯ, ಖಾಸಗಿ ದೂರನ್ನು ಕ್ರಿಮಿನಲ್ ದೂರನ್ನಾಗಿ ಪರಿವರ್ತಿಸಿ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಎಸ್. ಬಾಲನ್ ವಾದಿಸಿದ್ದರು.
ನಮಗೆ ಮಾನಹಾನಿಕರವಾಗುವಂತ ಸುದ್ದಿಯನ್ನು ಅಂದು ಬಿತ್ತರಿಸಿದ್ದರ ವಿರುದ್ಧ ನಾವು ಕೋರ್ಟ್ ಮೆಟ್ಟಿಲೇರಿದ್ದು, ಬರುವ ಆಗಸ್ಟ್ ತಿಂಗಳಲ್ಲಿ ಮತ್ತೆ ಪ್ರಕರಣದ ವಿಚಾರಣೆ ಬರಲಿದ್ದು ಅಂದು 25 ಕೋಟಿ ರೂ.ಗಳವರೆಗೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಇದೇ ವೇಳೆ ವಿಜಯಪಥಕ್ಕೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.