ಸೇಲಂ: ಸಂಬಂಧಿಕರು, ಸ್ನೇಹಿತರು ಸೇರಿ ಎಲ್ಲರ ಬಳಿಯು ತನ್ನ ಮಗನ ಕಾಲೇಜು ಶುಲ್ಕ ಕಟ್ಟಲು ಸಾಲ ಕೇಳಿ ಎಲ್ಲಿಯೂ ಸಾಲ ಸಿಗದಿದ್ದಾಗ ತಾಯಿಯೊಬ್ಬಳು ತನ್ನ ಪ್ರಾಣವನ್ನೇ ತ್ಯಾಗ ಮಾಡಿ ಕಾಲೇಜು ಶುಲ್ಕ ಭರಿಸಲು ಹೊರಟ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನೈರ್ಮಲ್ಯ ಕಾರ್ಯಕರ್ತಳಾಗಿದ್ದ ಪಾಪತಿ (46) ಎಂಬ ಮಹಿಳೆಯೇ ಮೃತರು. ಪಾಪತಿ ಪತಿಯನ್ನು ಕಳೆದುಕೊಂಡಿದ್ದು, ಪುತ್ರಿ ಹಾಗೂ ಪುತ್ರನೊಂದಿಗೆ ಸೇಲಂನಲ್ಲಿ ವಾಸವಾಗಿದ್ದಳು. ತನ್ನ ಮಗನ ಕಾಲೇಜು ಶುಲ್ಕ ಪಾವತಿಸಲು ಆಕೆಗೆ 45,000 ರೂ. ಅಗತ್ಯವಿತ್ತು. ಅದಕ್ಕಾಗಿ ಆಕೆ ಹತ್ತಿರದ ಸಂಬಂಧಿ ಹಾಗೂ ಸ್ನೇಹಿತರ ಬಳಿಯು ಸಾಲವನ್ನು ಕೇಳಿದ್ದಳು.
ಆದರೆ, ಯಾರೊಬ್ಬರು ಸಾಲ ನೀಡಲಿಲ್ಲ. ಈ ನಡುವೆ ಆಕೆಗೆ ಯಾರೋ ಸ್ವಚ್ಛತಾ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ, ಕುಟುಂಬದವರಿಗೆ ಸರ್ಕಾರ ಪರಿಹಾರ ನೀಡಲಿದೆ ಎಂಬ ಮಾತನ್ನು ಹೇಳಿದ್ದರು. ಒಂದು ಕಡೆ ಮಗನ ಕಾಲೇಜು ಶುಲ್ಕ ಭರಿಸದೇ ಒದ್ದಾಡುತ್ತಿದ್ದ ಪಾಪತಿ, ಈ ಮಾತನ್ನು ಕೇಳಿ ಖಿನ್ನತೆಗೆ ಒಳಗಾಗಿ ಕೊನೆಗೆ ತನ್ನ ಪ್ರಾಣವನ್ನು ಬಿಡಲು ನಿರ್ಧರಿಸಿದ್ದಳು.
ಅದಕ್ಕಾಗಿ ಪಾಪಾತಿ ಚಲಿಸುತ್ತಿದ್ದ ಬಸ್ ಮುಂದೆ ಜಿಗಿಯಲು ಪ್ರಯತ್ನಿಸಿದ್ದು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬಿದ್ದಿದ್ದಳು. ಅಷ್ಟಕ್ಕೂ ಸುಮ್ಮನಾಗದ ಆಕೆ ಕೆಲವು ನಿಮಿಷಗಳ ಬಳಿಕ ಮತ್ತೊಂದು ಬಸ್ ತಾನು ನಿಂತಲ್ಲಿಗೆ ಬರುತ್ತಿದ್ದಂತೆಯೇ ಅದಕ್ಕೆ ಸಿಲುಕಿ ಪ್ರಾಣವನ್ನು ಬಿಟ್ಟಿದ್ದಾಳೆ.
ಇನ್ನು ಸಿಸಿ ಕ್ಯಾಮರಾದಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸುವಾಗ ಪೊಲೀಸರೂ ಕೂಡ ವಿಡಿಯೋ ನೋಡಿ ಆಘಾತಕ್ಕೆ ಒಳಗಾಗಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.