ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಬಸ್‌ಗಳ ಚಾಲನಾ ಸಿಬ್ಬಂದಿಗೆ ನಿತ್ಯ ಮಾಡುವ ಡ್ಯೂಟಿಯ ಜತೆಗೆ ಹೆಚ್ಚುವರಿಯಾಗಿ ಸೊಳ್ಳೆ ಹೊಡೆಯೋ ಕೆಲಸವು ಸಿಕ್ಕಿದೆ. ಆದರೆ ಅದಕ್ಕೆ ಹೆಚ್ಚುವರಿಯಾಗಿ ಎಷ್ಟು ಭತ್ಯೆ ಕೊಡುತ್ತಾರೆ ಎಂಬುವುದು ಮಾತ್ರ ಗೊತ್ತಿಲ್ಲ.
ಏನಪ್ಪ ಇದು ಸೊಳ್ಳೆ ಹೊಡೆಯೋ ಕೆಲಸಾನ ಎಂದು ಅಚ್ಚರಿ ಪಡಬೇಡಿ ಇದು ಬಿಎಂಟಿಸಿಯ 25ನೇ ಘಟಕ ವ್ಯವಸ್ಥಾಪಕರು ಸೊಳ್ಳೆ ಹೊಡೆಯಬೇಕು ಎಂದು ಲಿಖಿತವಾಗಿ ಘಟಕದ ಚಾಲಕರು ಮತ್ತು ನಿರ್ವಾಹಕರಿಗೆ ಆದೇಶವನ್ನೇ ಹೊರಡಿಸಿದ್ದಾರೆ.
ಅದಕ್ಕೆ ಅವರು ಕೊಟ್ಟಿರುವ ಕಾರಣ ಏನು ಗೊತ್ತಾ?: ಈ ಮೂಲಕ ಚಾಲನಾ ಸಿಬ್ಬಂದಿಗಳಾದ ಚಾಲಕ ಮತ್ತು ನಿರ್ವಾಹಕರಿಗೆ ಆದೇಶಿಸುವುದೇನೆಂದರೆ, ವಾಹನಗಳನ್ನು ಕಾರ್ಯಾಚರಣೆ ಮಾಡಿಕೊಂಡು ಬಂದು ಘಟಕದಲ್ಲಿ ನಿಲ್ಲಿಸಿದಾಗ ವಾಹನದ ಒಳಗೆ ಸೊಳ್ಳೆಗಳು ಸೇರಿಕೊಳ್ಳುತ್ತಿವೆ.
ಪುನಃ ಸದರಿ ವಾಹನಗಳನ್ನು ಕಾರ್ಯಾಚರಣೆಗೆ ತೆಗೆದುಕೊಂಡು ಹೋದಾಗ ಬಸ್‌ನಲ್ಲಿರುವ ಸೊಳ್ಳೆಗಳು ಪ್ರಯಾಣಿಕರಿಗೆ ಕಚ್ಚುತ್ತಿದ್ದು, ಪ್ರಯಾಣಿಕರಿಂದ ದೂರುಗಳು ಬರುತ್ತಿವೆ. ಆದ್ದರಿಂದ ಚಾಲನಾ ಸಿಬ್ಬಂದಿಗಳಾದ ತಾವುಗಳು ವಾಹನವನ್ನು ಕಾರ್ಯಾಚರಣೆಗೆ ತೆಗೆದುಕೊಂಡು ಹೋಗುವ ಮೊದಲು ವಾಹನವನ್ನು ಪರಿಶೀಲಿಸಿ, ಇಂಜಿನ್ ಸ್ಪಾರ್ಟ್ ಮಾಡಿ, ಎರಡು ಬಾಗಿಲುಗಳನ್ನು ಓಪನ್ ಮಾಡಿ ಬ್ಲೋವರ್ ಆನ್ ಮಾಡಿ.
ಈ ವೇಳೆ ಸೊಳ್ಳೆಗಳಿರುವುದು ಕಂಡು ಬಂದಲ್ಲಿ ಬಟ್ಟೆಯಿಂದ ಓಡಿಸಿ ಸೊಳ್ಳೆಗಳು ಇಲ್ಲದೇ ಇರುವ ಬಗ್ಗೆ ಖಾತರಿಪಡಿಸಿಕೊಂಡು ನಂತರ ಮಾರ್ಗಾಚರಣೆಗೆ ತೆಗೆದುಕೊಂಡು ಹೋಗಲು ಈ ಮೂಲಕ ಆದೇಶಿಸಲಾಗಿದೆ ಎಂದು ಈ ರೀತಿ ಆದೇಶ ಮಾಡಿ ಬಿಎಂಟಿಸಿಯ 25ನೇ ಘಟಕದ ಹಿರಿಯ ಘಟಕ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ
ಡಿಎಂ ಆದೇಶ ಹೊರಡಿಸಿ ಸಹಿ ಮಾಡಿರುವ ಪ್ರತಿ ವಿಜಯಪಥಕ್ಕೆ ಸಿಕ್ಕಿದೆ. ಇನ್ನು ಘಟಕ ವ್ಯವಸ್ಥಾಪಕರು ಈ ಆದೇಶ ಹೊರಡಿಸಿದ್ದಾರೆ ಎಂದರೆ ಅವರಿಗೆ ಸೊಳ್ಳೆ ಓಡಿಸುವುದಕ್ಕೆ ಬೇರೆ ವೈಜ್ಞಾನಿಕ ಮಾರ್ಗ ಸಿಗಲಿಲ್ಲವೆ ಎಂಬುವುದು ನೌಕರರ ನಡುವೆ ಎದ್ದಿರುವ ಗುಸುಗುಸು.
ಸೊಳ್ಳೆ ಓಡಿಸುವುದಕ್ಕೆ ಮತ್ತು ಬಸ್‌ಗಳು ಯಾವಾಗಲು ಸುಗಂಧ ಬೀರುವಂತೆ ಮಾಡುವುದಕ್ಕೆ ದಿನಕ್ಕೆ ಒಂದೆರಡು ಊದುಬತ್ತಿ (ಗಂಧದ ಕಡ್ಡಿ)ಗಳನ್ನು ಹಚ್ಚಿದರೆ ಸಾಕಾಗುತ್ತಿತ್ತು. ಇನ್ನು ಅದಕ್ಕೆ ದಿನಕ್ಕೆ ಒಂದೆರಡು ರೂಪಾಯಿ ಬೇಕಾಗಬಹುದು. ಇದನ್ನು ಹಚ್ಚಿದರೆ ಬಸ್‌ನಲ್ಲಿ ಸುಗಂಧಪರಿಮಳ ಬೀರುವ ಮೂಲಕ ಪ್ರಯಾಣಿಕರಿಗೂ ಮುಂಜಾನೆ ಮುದನೀಡಿದಂತಾಗುತ್ತದೆ.
ಅದನ್ನು ಬಿಟ್ಟು ಬೆಳಗ್ಗೆ ಎದ್ದು ಡ್ಯೂಟಿಗೆ ಬರುವ ಚಾಲಕರು ಮತ್ತು ನಿರ್ವಾಹಕರಿಗೆ ಮೊದಲು ಬಟ್ಟೆಯಿಂದ ಸೊಳ್ಳೆ ಓಡಿಸಿ ನಂತರ ಬಸ್‌ಗಳನ್ನು ತೆಗೆದುಕೊಂಡು ಹೋಗಿ ಅಂತ ಈ ರೀತಿ ಅವೈಜ್ಞಾನಿಕ ಆದೇಶ ಹೊರಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಸದ್ಯದ ಪ್ರಶ್ನೆಯಾಗಿದೆ.
ಇದೇನೆ ಇರಲಿ ಚಾಲಕ ಮತ್ತು ನಿರ್ವಾಹಕರಿಗೆ ಘಟಕ ವ್ಯವಸ್ಥಾಪಕರು ಹೆಚ್ಚುವರಿ ಕೆಲಸದ ಜವಾಬ್ದಾರಿಯೇನೋ ಕೊಟ್ಟಿದ್ದಾರೆ. ಆದರೆ ಅದಕ್ಕೆ ತಕ್ಕ ವೇತನವನ್ನು ನಿಗದಿ ಮಾಡಬೇಕಲ್ಲ, ಅದನ್ನು ಯಾವಾಗ ಮಾಡುತ್ತಾರೆ ಎಂಬುದರ ಬಗ್ಗೆ ತಿಳಿಸಿಲ್ಲವಲ್ಲ ಎಂದು ನೌಕರರು ಬೇಸರ ಪಟ್ಟುಕೊಳ್ಳುತ್ತಿದ್ದಾರೆ.
ಅದಕ್ಕೆ ಘಟಕ ವ್ಯವಸ್ಥಾಪಕರು ಮುಂದೆ ಏನು ಹೇಳುತ್ತಾರೆ ಅಥವಾ ಆದೇಶ ಹೊರಡಿಸುತ್ತಾರೆ ಎಂಬುದನ್ನು ಕಾದು ಚಾತಕ ಪಕ್ಷಿಯಂತೆ ನೌಕರರು ಕಾದುಕುಳಿತಿದ್ದಾರೆ.