ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್‌ಗಳಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ. ಇದರ ಲಾಭ ಪಡೆಯಲು ಕಳ್ಳರು ತಮ್ಮ ಕೈ ಚಳಕವನ್ನು ತೋರಿಸುತ್ತಿದ್ದಾರೆ.
ಸೋಮವಾರ ಮಧ್ಯಾಹ್ನ 3.30ರ ಸಮಯಲ್ಲಿ ಬೆಂಗಳೂರಿಗೆ ತನ್ನ ನಾದಿನಿಯನ್ನು ಕಳುಹಿಸುವ ಸಲುವಾಗಿ ಅರಸೀಕೆರೆ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದ ವ್ಯಕ್ತಿಯೊಬ್ಬರ 20 ಸಾವಿರ ರೂಪಾಯಿಯನ್ನು ಕ್ಷಣಾರ್ಧದಲ್ಲೇ ಕಳವು ಮಾಡಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊಸೂರು ಗ್ರಾಮದ ನಿವಾಸಿ ಜಗದೀಶ್ ಎಂಬುವರೆ 20 ಸಾವಿರ ರೂ. ಕಳೆದುಕೊಂಡವರು. ಬೆಂಗಳೂರಿನಲ್ಲಿ ವಾಸವಿರುವ ತನ್ನ ನಾದಿನಿ ಸುಜಾತ ಎಂಬುವರು ಎರಡು ದಿನಗಳ ಹಿಂದೆ ಹೊಸೂರಿನ ಜಗದೀಶ್ ಅವರ ಮನೆಗೆ ಹೋಗಿದ್ದರು. ಎರಡು ದಿನ ಗ್ರಾಮದಲ್ಲೇ ಇದ್ದ ಸುಜಾತ ಸೋಮವಾರ ಬೆಂಗಳೂರಿಗೆ ವಾಪಸ್ ಬರುತ್ತಿದ್ದರು.
ಈ ವೇಳೆ ಹೊಸೂರು ಗ್ರಾಮದಿಂದ ಆಕೆಯನ್ನು ಅರಸೀಕೆರೆ ಬಸ್ ನಿಲ್ದಾಣದವರೆಗೂ ಬೈಕ್‌ನಲ್ಲಿ ಕರೆದುಕೊಂಡು ಬಂದು ಬಸ್ ಹತ್ತಿಸಲು ಮುಂದಾದರು. ಆ ಸಮಯದಲ್ಲಿ ಬೆಂಗಳೂರಿನ ಕಡೆಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಜಗದೀಶ್ ಬಸ್ ಹತ್ತಿ ಸೀಟ್ ಹಿಡಿದುಕೊಂಡು ಕುಳಿತಿದ್ದರು.
ಸುಜಾತ ನಂತರ ಬಸ್‌ಹತ್ತಿದರು. ನಾದಿನಿಗೆ ಸೀಟ್ ಮಾಡಿಕೊಟ್ಟು ಬಳಿಕ ಬಸ್ ಇಳಿದಿದ್ದಾರೆ ಜಗದೀಶ್. ಈ ನಡುವೆ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು, ಗಿರವಿ ಇಟ್ಟಿದ್ದ ಆಭರಣಗಳನ್ನು ಬಿಡಿಸಿಕೊಳ್ಳುವುದಕ್ಕೆ 20 ಸಾವಿರ ರೂಪಾಯಿಯನ್ನು ತಂದಿದ್ದ ಜಗದೀಶ್ ಅವರ ಹಣವನ್ನು ಪ್ಯಾಂಟ್‌ಜೇಬಿನಿಂದ ಕಳವು ಮಾಡಿದ್ದಾರೆ.
ಬಳಿಕ ಬಸ್ ಹೊರಟಿದೆ. ನಂತರ ಹಣ ಕಳವಾಗಿರುವ ಬಗ್ಗೆ ಸುಜಾತ ಅವರಿಗೆ ಜಗದೀಶ್ ಹೇಳಿದ್ದಾರೆ. ಆಕೆ ಕೂಡಲೇ ಕಂಡಕ್ಟರ್ ಅವರ ಗಮನಕ್ಕೆ ತಂದಿದ್ದಾರೆ. ನಿರ್ವಾಹಕರು ನೇರವಾಗಿ ಬಸ್‌ಅನ್ನು ತಿಪಟೂರಿನ ಗ್ರಾಮಾಂತರ ಠಾಣೆಗೆ ತೆಗೆದುಕೊಂಡು ಹೋಗಿ 20 ಸಾವಿರ ರೂಪಾಯಿ ಕಳುವಾಗಿದೆ ದಯಮಾಡಿ ಪ್ರಯಾಣಿಕರನ್ನು ಚೆಕ್ ಮಾಡಿದರೆ ಹಣ ಸಿಗಬಹದು ಎಂದು ಮನವಿ ಮಾಡಿದ್ದಾರೆ.
ಆದರೆ, ಪೊಲೀಸರು ಚೆಕ್ ಮಾಡಲು ಮುಂದಾಗದೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಅಲ್ಲದೆ ಹಣ ಕಳೆದುಕೊಂಡ ಜಗದೀಶ್ ಅವರು ಬೈಕ್‌ನಲ್ಲಿ ಅರಸೀಕೆರೆಯಿಂದ ತಿಪಟೂರಿಗೆ ಬಂದು ಮನವಿ ಮಾಡಿದ್ದು, ಅವರಿಗೂ ಕೂಡ ಅವಾಜ್‌ಹಾಕಿ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ನೀವು ಕಳೆದುಕೊಂಡ ವ್ಯಾಪ್ತಿಯ ಪೊಲೀಸ್‌ಠಾಣೆ ಬಸ್ ತೆಗೆದುಕೊಂಡು ಹೋಗಿ ಎಂದು ಕೋಪದಿಂದ ಹೇಳಿ ಕಳುಹಿಸಿದ್ದಾರೆ.
ಆ ಬಳಿಕ ಮತ್ತೆ ನಿರ್ವಾಹಕರು ತಿಪಟೂರಿನ ಟೌನ್‌ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ಹೋಗಿ ಮತ್ತೆ ನಡೆದಿದ್ದೆಲ್ಲವನ್ನು ವಿವರಿಸಿದ್ದಾರೆ. ಟೌನ್‌ಪೊಲೀಸರು ಕೂಡ ಯಾವುದೆ ಕ್ರಮ ತೆಗೆದುಕೊಳ್ಳದೆ ಅದೇ ಬೇಜವಾಬ್ದಾರಿಯಿಂದಲೇ ವಾಪಸ್ ಕಳುಹಿಸಿದ್ದಾರೆ. ಒಂದು ವೇಳೆ ನಿರ್ವಾಹಕರು ಮತ್ತು ಹಣ ಕಳೆದುಕೊಂಡವರು ಮನವಿ ಮಾಡಿದಂತೆ ಪೊಲೀಸರು ಬಸ್‌ನಲ್ಲಿ ಪ್ರಯಾಣಿಕರನ್ನು ಚೆಕ್ ಮಾಡಿದ್ದರೆ ಕಳ್ಳ ಸಿಗುತ್ತಿದ್ದನೇನೋ?
ಆದರೆ, ಪೊಲೀಸರ ಉದಾಸೀನತೆಯಿಂದ ಕಳ್ಳ ಯಾರು ಎಂಬುವುದೇ ಗೊತ್ತಾಗಲಿಲ್ಲ. ಪೊಲೀಸರ ಈ ನಡೆಯನ್ನು ಬಸ್‌ನಲ್ಲಿ ಇದ್ದ ಪ್ರಯಾಣಿಕರು ಕೂಡ ಖಂಡಿಸಿದ್ದು, ಇವರು ರಕ್ಷಕರೋ ಇಲ್ಲ ರಕ್ಕಸರೋ ಎಂದು ಕಿಡಿಕಾರಿದ್ದಾರೆ. ಇನ್ನು ಇದೆಲ್ಲ ಆದ ಬಳಿಕ ನಿನ್ನೆ ಮತ್ತೆ ಜಗದೀಶ್ ಅವರು ವಾಪಸ್ ಹೋಗಿ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದು ಜಗದೀಶ್ ಒಬ್ಬರೇ ಈ ರೀತಿ ಹಣ ಕಳೆದುಕೊಂಡಿಲ್ಲ. ಶಕ್ತಿಯೋಜನೆ ಜಾರಿಯಾದ ಬಳಿಕ ಬಸ್‌ಗಳಲ್ಲಿ ಕಳವು ಪ್ರಕರಣಗಳು ಕೂಡ ಹೆಚ್ಚಾಗುತ್ತಿದೆ. ಮೊನ್ನೆ ಬಿಎಂಟಿಸಿಯ ಬಸ್‌ನಲ್ಲಿ ಮೆಜೆಸ್ಟಿಕ್ ಮತ್ತು ಚಿಕ್ಕಲ್ಲಸಂದ್ರ ಮಾರ್ಗದ ಕೆಂಪೇಗೌಡ ವೈದ್ಯಕೀಯ ಕಾಲೇಜಿನ ಸಿಗ್ನಲ್ ಬಳಿ ಮೊಬೈಲ್ ಕದ್ದು ಓಡಿಹೋಗಿದ್ದಾರೆ ಖದೀಮರು.
ಇನ್ನು ಕಳ್ಳರು ಧರಿಸುವ ಬಟ್ಟೆ ನೋಡಿದರೆ ಇವರು ಕಳ್ಳರು ಎಂದು ಗೊತ್ತಾಗೋದೆ ಇಲ್ಲ. ಅಧಿಕಾರಿಗಳ ರೀತಿ ಒಳ್ಳೆಯ ಬಟ್ಟೆಗಳನ್ನೇ ಹಾಕಿಕೊಂಡು ಬಂದಿರುತ್ತಾರೆ. ಆದರೆ ಅವರ ಹಾವಭಾವ ಮಾತ್ರ ಇವರು ಕಳ್ಳರೆ ಎಂಬುದನ್ನು ತೋರಿಸುತ್ತಿರುತ್ತದೆ. ನಮ್ಮ ಜನ ಅವರ ಹಾವಭಾವ ನೋಡದೆ ಅವರ ಬಟ್ಟೆ ನೋಡಿ ಮೋಸಹೋಗುತ್ತಿದ್ದಾರೆ.
ಕಳ್ಳರಿಗೆ ಸಾಥ್ ನೀಡುತ್ತಿದ್ದರೇನೋ ಎಂಬಂತೆ ಕೆಲ ಪೊಲೀಸರು ನಡೆದುಕೊಳ್ಳುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಗೃಹ ಸಚಿವರು ಇಂಥ ಪೊಲೀಸರಿಗೆ ತರಬೇತಿ ನೀಡುವ ಜತೆಗೆ ಕ್ರಮವನ್ನು ಜರುಗಿಸುವ ಅವಶ್ಯಕತೆಯಿದೆ. ಇನ್ನು ಸಾರಿಗೆ ಸಚಿವರು ಅಧಿಕಾರಿಗಳು ಕೂಡ ಈ ಬಗ್ಗೆ ಗಮನ ನೀಡಬೇಕಿದೆ.