ಹೈದರಾಬಾದ್: ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು (ಟಿಎಸ್‌ಆರ್‌ಟಿಸಿ) ಸರ್ಕಾರದೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಮೂಲಕ 46,000ಕ್ಕೂ ಹೆಚ್ಚು ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಂಡಿದೆ.
ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮ್ಯಾರಥಾನ್ ಸಭೆಯ ನಂತರ, ಗುರುವಾರ ಪ್ರಾರಂಭವಾಗಲಿರುವ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲು ಸರ್ಕಾರ ನಿರ್ಧರಿಸಿತು.
ಮಸೂದೆಯನ್ನು ಅಂಗೀಕರಿಸಿದ ನಂತರ, ಎಲ್ಲಾ 46,746 TSRTC ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲಾಗುವುದು. ಇತರ ಇಲಾಖೆಗಳಲ್ಲಿನ ಸರ್ಕಾರಿ ನೌಕರರಿಗೆ ವಿಸ್ತರಿಸಿದಂತೆ ಎಲ್ಲ ಸವಲತ್ತುಗಳಿಗೆ ಈ ಸಾರಿಗೆ ನೌಕರರು ಅರ್ಹರಾಗಿರುತ್ತಾರೆ ಎಂದು ಸಂಪುಟ ಸಭೆ ತಿಳಿಸಿದೆ..
ತೆಲಂಗಾಣದಲ್ಲಿ RTC ಅನ್ನು ಮೊದಲು NSR-RTD (ನಿಜಾಮ್ ರಾಜ್ಯ ರೈಲು ಮತ್ತು ರಸ್ತೆ ಸಾರಿಗೆ ಇಲಾಖೆ) ಎಂದು ಸ್ಥಾಪಿಸಲಾಯಿತು, ಇದು ಹಿಂದಿನ ಹೈದರಾಬಾದ್ ರಾಜ್ಯದಲ್ಲಿ ನಿಜಾಮ್ ಸ್ಟೇಟ್ ರೈಲ್ವೇಯ ಒಂದು ವಿಭಾಗವಾಗಿದೆ, 1932 ರಲ್ಲಿ 27 ಬಸ್ಸುಗಳು ಮತ್ತು 166 ನೌಕರರೊಂದಿಗೆ ಆರಂಭವಾಯಿತು.
ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (APSRTC) ಜನವರಿ 11, 1958 ರಂದು ರಸ್ತೆ ಸಾರಿಗೆ ನಿಗಮಗಳ ಕಾಯಿದೆ 1950 ರ ಅನುಸಾರವಾಗಿ ಸ್ಥಾಪಿಸಲಾಯಿತು. ಆಂಧ್ರಪ್ರದೇಶದ ವಿಭಜನೆಯ ನಂತರ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ RTCಯ ಎರಡು ಪ್ರತ್ಯೇಕ ಆಡಳಿತ ಘಟಕಗಳು ಜೂನ್ 3, 2015 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ಪರಿಣಾಮವಾಗಿ, ತೆಲಂಗಾಣ ಸರ್ಕಾರವು ಏಪ್ರಿಲ್ 27, 2016 ರಂದು ರಸ್ತೆ ಸಾರಿಗೆ ನಿಗಮ ಕಾಯಿದೆ, 1950 ರ ಅಡಿಯಲ್ಲಿ TSRTC ಅನ್ನು ಸ್ಥಾಪಿಸಿತು. ಈಗ, TSRTC 9,384 ಬಸ್‌ಗಳು ಮತ್ತು 46,746 ನೌಕರರನ್ನು ಹೊಂದಿದೆ. ಸದ್ಯ ರಾಜ್ಯದಲ್ಲಿ 364 ಬಸ್ ನಿಲ್ದಾಣಗಳಿವೆ ಮತ್ತು 11 ಪ್ರದೇಶಗಳನ್ನು ಒಳಗೊಂಡ 98 ಡಿಪೋಗಳಿಂದ ನಿರ್ವಹಿಸಲಾಗುತ್ತಿದೆ.
ಇನ್ನು ಟಿಎಸ್‌ಆರ್‌ಟಿಸಿಯನ್ನು ಸರ್ಕಾರದೊಂದಿಗೆ ವಿಲೀನ ಮಾಡುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿರುವುದನ್ನು ಸ್ವಾಗತಿಸಿರುವ ನೌಕರರು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.