ಗೆಳೆಯ- ಗೆಳತಿಯರೆಂದರೆ ಎಲ್ಲ. ಕಷ್ಟ – ಸುಖಗಳಲ್ಲಿ ಕೈ ಹಿಡಿಯುವ, ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುವ, ತಮಾಷೆ ಮಾಡುವ, ರೇಗಿಸುವ ಬಂಧ. ಫ್ರೆಂಡ್ಗಳ ಬಳಿ ಇರುವ ಸಲುಗೆ ಕೆಲವೊಮ್ಮೆ ನಮ್ಮ ಸ್ವಂತ ಮನೆಯ ಇತರ ಸದಸ್ಯರಲ್ಲಿ ಕೂಡ ಕಾಣಲು ಸಾಧ್ಯವಿಲ್ಲ.
ಪಾರ್ಟಿ ಮಾಡುವಾಗ, ಸಿನಿಮಾಗೆ ಹೋಗುವಾಗ, ಬೈಕ್ನಲ್ಲಿ ಲಾಂಗ್ ರೈಡ್ ಹೋಗುವಾಗ ಫ್ರೆಂಡ್ಗಳ ಸಾಥ್ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ರೀತಿ ಬಹಳ ದಿನಗಳ ಕಾಲ ನೆನಪಿನಲ್ಲಿ ಉಳಿಯುವಂತಹ ಸೊಗಸಾದ ಸಂದರ್ಭವದು. ಅದಕ್ಕೇ ಹೇಳೋದು ಸ್ಕೂಲ್ ಲೈಫ್ ಇಸ್ ಗೋಲ್ಡನ್ ಲೈಫ್ !
ಈ ಮಾತನ್ನ ಹೇಳಿದವರಿಗೆ ನಾವು ಕೊನೆಯವರೆಗೂ ಥ್ಯಾಂಕ್ಸ್ ಹೇಳಲೇಬೇಕು. ಏಕೆಂದರೆ ಶಾಲೆಯ ಮೋಜಿನ ದಿನಗಳು, ಗೆಳೆಯರ ಜೊತೆ ನಾವು ಕಾಲ ಕಳೆದ ಸಂತೋಷದ ಕ್ಷಣಗಳು, ಜೊತೆಯಲ್ಲಿ ಕಲಿತ ಆಟ – ಪಾಠಗಳು, ಬಿದ್ದು ಗಾಯ ಮಾಡಿಕೊಂಡಾಗ ಒದಗಿ ಬಂದ ಗೆಳೆಯರ ಸಹಕಾರ ಎಲ್ಲವನ್ನು ಈಗ ನೆನೆಸಿಕೊಂಡರೆ ತುಂಬಾ ಖುಷಿಯಾಗುತ್ತದೆ.
ಮತ್ತೊಮ್ಮೆ ಅಂತಹ ದಿನಗಳು ಬರಬಾರದೇ ಅನಿಸುತ್ತದೆ. ಗೆಳೆಯರ ಜೊತೆ ನಾವು ತುಂಬಾ ಸಲುಗೆಯಿಂದ ಎಲ್ಲ ವಿಷಯಗಳಲ್ಲೂ ನಡೆದುಕೊಂಡಿರುತ್ತೇವೆ. ಗೆಳೆಯರ ಜೊತೆ ಸೇರಿ ದೊಡ್ಡವರಿಗೆ, ಟೀಚರ್ಗೆ ಕೂಡ ಮಾಡಿದ ಕೀಟಲೆಗಳು ಇಂದಿಗೂ ಕಣ್ಣಿಗೆ ಕಟ್ಟಿದ ಹಾಗೆ ಇರುತ್ತವೆ. ಹಾಗಾಗಿ ಗೆಳೆತನಕ್ಕೆ ಇರುವ ಮೌಲ್ಯ ಬೇರೆ ಯಾವುದಕ್ಕೂ ಸಿಗುವುದಿಲ್ಲ ಅನ್ನಿಸುತ್ತದೆ.
ಇಂಥ ಸ್ನೇಹದ ಮಿಲನ 27 ವರ್ಷಗಳ ಬಳಿಕವಾದರೆ ಅದರ ಖುಷಿ ಹೇಗಿರಬೇಕು. ಆ ಸಮಯ ಹೇಗಿರಬೇಕು ಅಲ್ವ. ಅಂಥ ಕ್ಷಣವನ್ನು ಇಂದು (ಆ.6)ರ ವಿಶ್ವ ಗೆಳೆಯರ ದಿನದಂದು ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಅತ್ತಹಳ್ಳಿ ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯ 1996ರ ಬ್ಯಾಚ್ ವಿದ್ಯಾರ್ಥಿಗಳು ಒಟ್ಟಿಗೆ ಒಂದೆಡೆ ಸೇರುವ ಮೂಲಕ ಸಂಭ್ರಮಿಸಿದ್ದಾರೆ.
ಈ ಸಂಭ್ರಮದಲ್ಲಿ ಕೆಲ ಗೆಳೆಯ-ಗೆಳತಿಯರನ್ನು ಮಿಸ್ ಮಾಡಿಕೊಂಡಿದ್ದಾರೆ. ಅಂದರೆ ಕೆಲವರು ಈ ಕ್ಷಣವನ್ನು ಸವಿಯುವುದಕ್ಕೆ ಕೆಲಸದ ಒತ್ತಡದಿಂದ ಸಾಧ್ಯವಾಗಿಲ್ಲ. ಆದರೂ ಪರವಾಗಿಲ್ಲ ಎಲ್ಲ ಗೆಳೆಯರು ಒಂದೆಡೆ ಸೇರಿರುವ ವಿಷಯ ತಿಳಿದು ದೂರದಿಂದಲೇ ಅವರು ಕೂಡ ಖುಷಿ ಪಟ್ಟಿದ್ದಾರೆ.
ಹೌದು! ಈ ಕ್ಷಣ ಸುಮಾರು 27 ವರ್ಷಗಳ ಬಳಿಕ ಬಂದಿದ್ದು, ಸೇರಿದ ಎಲ್ಲರೂ ಲಿಂಗಭೇದ ಮರೆತು ಖುಷಿಯಿಂದ ಬಾಡೂಟ ಇದನ್ನು ತಿನ್ನದವರಿಗೆ ಸಿಹಿ ಊಟ ಸಿದ್ಧಪಡಿಸಿಕೊಂಡು ಅದನ್ನು ಸವಿದ ಆ ಕ್ಷಣವನ್ನು ಮರೆಯುವುದಕ್ಕೆ ಸಾಧ್ಯವಿಲ್ಲ ಎಂದು ತಮ್ಮ ಬಾಲ್ಯದ ನೆನಪಿನ ಬುತ್ತಿಯನ್ನು ಬಿಚ್ಚುವ ಜೊತೆಗೆ ಸಂಭ್ರಮಿಸಿದರು.
ಬನ್ನೂರಿನಿಂದ ಕೇವಲ 6-7 ಕಿಮೀ ದೂರವಿರುವ ಶ್ರೀ ಒಡ್ಗಲ್ರಂಗನಾಥ ಸ್ವಾಮಿ ಬೆಟ್ಟದ ಕೆಳಗೆ ಒಂದೆಡೆ ಸೇರಿದ ಅಂದಿನ ಬಾಲ್ಯದ ಇಂದು ಗೃಹಸ್ಥರು ಇಲ್ಲ ಗೃಹಿಣಿಯರಾಗಿರುವ ಗೆಳೆಯ ಗೆಳತಿಯರು ಸಂಭ್ರಮಿಸಿದ್ದಾರೆ. 27 ವರ್ಷಗಳಿಂದ ಬದುಕು ಕಟ್ಟಿಕೊಳ್ಳುವುದಕ್ಕೋಸ್ಕರ ಬೇರೆ ಬೇರೆ ನೂರಾರು ಕಿಮೀ ದೂರದ ಸ್ಥಳದಲ್ಲಿ ನೆಲೆಸಿರುವ ಈ ಸ್ನೇಹಿತರು ಹೀಗೆ ಒಂದೆಡೆ ಸೇರಲು ತಿಂಗಳ ಹಿಂದೆಯೇ ವಾಟ್ಸ್ಆಪ್ ಮೂಲಕ ಒಬ್ಬರನ್ನೊಬ್ಬರು ಸಂಪರ್ಕಿಸಿ ಪ್ಲಾನ್ ಮಾಡಿಕೊಂಡು ಇಂದು ಸ್ನೇಹ ಮಿಲನಕ್ಕೆ ಮೂಹೂರ್ತ ಫಿಕ್ಸ್ ಮಾಡಿಕೊಂಡಿದ್ದರು.
ಅದರಂತೆ ಇಂದು ಎಲ್ಲರೂ ಸೇರಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಈ ಖುಷಿ ಮತ್ತೆ ನಾವು ಮುಂದಿನ ದಿನಗಳವರೆಗೂ ಸೇರುವ ವರೆಗೂ ನೆನಪಿನಲ್ಲಿ ಇರುತ್ತದೆ ಎಂದು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಎನ್.ಪದ್ಮಾ ಬೀಡನಹಳ್ಳಿ ವಿಜಯಪಥದೊಂದಿಗೆ ಹಂಚಿಕೊಂಡಿದ್ದಾರೆ.
27 ವರ್ಷದ ಬಳಿಕದ ಬಂದ ಈ ಮಧುರ ಕ್ಷಣಕ್ಕೆ ದೇವಯ್ಯ ಕುಂತನಹಳ್ಳಿ, ನಂದೀಶ್ ಬೀಡನಹಳ್ಳಿ, ನಾಗರಾಜು ಬೀಡನಹಳ್ಳಿ, ಅರವಿಂದ, ಶಿಕ್ಷಕ ದೇವರಾಜು, ಶಾಮ್, ಲೋಕೇಶ್, ಕೆ.ಗಿರೀಶ, ಕೃಷ್ಣ, ಜಗದೀಶ್, ಸತೀಶ, ಅನಿತಾ ಮೇಗಳಕೊಪ್ಪಲು, ಸತೀಶ, ಚಂದ್ರಶೇಖರ್, ಮಹೇಶ್ ಬಸವನಹಳ್ಳಿ, ಚಂದ್ರಶೇಖರ್, ಮಧುಸೂದನ, ನಂದೀಶ ಅತ್ತಹಳ್ಳಿ, ನವೀನ, ರೇಖಾ, ಭಾಗ್ಯ, ರತ್ನ ಕಗ್ಗಲೀಪುರ, ಸವಿತಾ ಅತ್ತಹಳ್ಳಿ, ಮೀನಾಕ್ಷಿ ಬೆಟ್ಟಹಳ್ಳಿ, ಶಿಕ್ಷಕಿ ಪ್ರತಿಮಾ, ಲತಾ ಅತ್ತಹಳ್ಳಿ ಇವರೆಲ್ಲರೂ ಸಾಕ್ಷಿಯಾದರು.