ಬೆಂಗಳೂರು: ಸ್ಯಾಂಡಲ್ವುಡ್ನ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಲ್ಲೇಶ್ವರಂನ ನಿವಾಸದಲ್ಲಿ ಏರ್ಪಾಡು ಮಾಡಲಾಗಿದದ್ದು, ಈಗಾಗಲೇ ಸಂಬಂಧಿಕರು, ಸ್ನೇಹಿತರು, ಅಭಿಮಾನಿಗಳು ದರ್ಶನ ಪಡೆಯುತ್ತಿದ್ದಾರೆ.
ಇದೇ ವೇಳೆ ಹಿರಿಯ ನಟ ಶ್ರೀನಾಥ್, ಗಿರಿಜಾ ಲೋಕೇಶ್ ಹಾಗೂ ನಟ ರಾಘವೇಂದ್ರ ರಾಜ್ಕುಮಾರ್, ಪುನೀತ್ರಾಜ್ ಕುಮಾರ್ ಪತ್ನಿ ಅಶ್ವಿನಿ ಸೇರಿದಂತೆ ನೂರಾರು ಗಣ್ಯರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ್ದಾರೆ.
ಈ ವೇಳೆ ಮಾತನಾಡಿದ ನಟ ರಾಘವೇಂದ್ರ ರಾಜ್ಕುಮಾರ್, ಕೆಲವೊಂದು ಸಮಯದಲ್ಲಿ ಎಲ್ಲ ಸ್ತಬ್ಧವಾಗಿಬಿಡುತ್ತೆ. ಇದಕ್ಕೆ ಏನು ಮಾತನಾಡಬೇಕೆಂದು ಗೊತ್ತಾಗಲ್ಲ. ಹೋಗುವವರು ಹೊರಟು ಹೋಗ್ತಾರೆ. ಇರೋರ ಕಷ್ಟ ನೋಡೋಕೆ ಆಗಲ್ಲ. ಸ್ಪಂದನ ಇನ್ನಿಲ್ಲವೆಂದು ತಂದೆಗೆ ಹೇಳೋದಾ, ಪತಿ ರಾಘುಗೆ ಹೇಳೋದಾ ಗೊತ್ತಾಗುತ್ತಿಲ್ಲ.
ರಾಘು, ಅಪ್ಪು ಎಲ್ಲ ನಮ್ಮ ಮನೆಯಲ್ಲಿ ಬೆಳೆದವರು. ಇಂತಹ ಚಿಕ್ಕವರಿಗೆ ಹೀಗೆ ಆಗುತ್ತೆ ಎಂದರೆ ತಡೆದುಕೊಳ್ಳಲು ಆಗಲ್ಲ. ನನ್ನ ಹೆಸರೇ ಇರುವ ರಾಘುನನ್ನ ಮನೆಯಲ್ಲಿ ಸಣ್ಣರಾಘು ಎಂದರೆ, ನನ್ನನ್ನು ದೊಡ್ಡ ರಾಘು ಎಂದು ಕರೆಯುತ್ತಾರೆ. ಅವರನ್ನ ತಬ್ಬಿಕೊಂಡು ಏನು ಹೇಳಬೇಕು ಎಂದು ತೋಚಲಿಲ್ಲ ಎಂದು ರಾಘವೇಂದ್ರ ರಾಜ್ಕುಮಾರ್ ದುಃಖಿತರಾದರು.
ನಟಿ ಗಿರಿಜಾ ಲೋಕೇಶ್ ಹಾಗೂ ಶ್ರೀನಾಥ್: ನಟಿ ಗಿರಿಜಾ ಲೋಕೇಶ್, ಸ್ಪಂದನಾ ಅವರ ಮುಖದಲ್ಲಿದ್ದ ಕಳೆ ಒಂದಿಷ್ಟು ಮಾಸೇಯಿಲ್ಲ. ಇನ್ನು ಬದುಕೆ ಇದ್ದಾಳೆ ಅನಿಸುತ್ತೆ. ದೇವರು ಎಂತ ಕ್ರೂರಿ, ಒಂದು ಸುಂದರ ಸಂಸಾರವನ್ನು ಹಾಳು ಮಾಡಿಬಿಟ್ಟ. ನಮ್ಮಂತವರಿಗೆ ಅಂತಹ ಸಾವು ಬಂದರೇ ಮಲಗಿದ್ದಲ್ಲಿ ಸುಖವಾಗಿ ಹೋಗುತ್ತೀವಿ. ಇಷ್ಟು ಪುಟ್ಟ ಮಕ್ಕಳಿಗೆ ಹೀಗಾದರೆ ಏನು ಮಾಡುವುದು ಎಂದು ಕಣ್ಣೀರು ಹಾಕಿದರು.
ಸ್ಪಂದನಾ ಅವರ ತಂದೆ, ತಾಯಿಗೆ ದೇವರು ಆಕೆಯ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ. ನಮ್ಮ ರಾಘುನಾ, ಶೌರ್ಯನ ದೇವರು ಕಾಪಾಡಲಿ. ಇಂತಹ ಸಾವು ಯಾರಿಗೂ ಬರಬಾರದು ಎಂದು ಕಣ್ಣೀರು ಹಾಕಿದರು.
ಇನ್ನು ಹಿರಿಯ ನಟ ಶ್ರೀನಾಥ್ ಮಾತನಾಡಿ, ಆ ಮಗು ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ರಾಘುಗೆ ದುಃಖ ತಡೆದುಕೊಳ್ಳುವ ಶಕ್ತಿ ಆ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.