ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಶ್ಲಾಘನೀಯ ಸೇವೆ ಸಲ್ಲಿಸಿದ ನಿಗಮದ ಸಿಬ್ಬಂದಿಗಳಿಗೆ ನೀಡುವ ನಗದು ಬಹುಮಾನದ ಮೊತ್ತವನ್ನು 500 ರೂ.ಗಳಿಂದ 2 ಸಾವಿರ ರೂ.ಗಳಿಗೆ ಪರಿಷ್ಕರಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಇಂದು ಆದೇಶ ಹೊರಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ಅವರು, ಶ್ಲಾಘನೀಯ ಸೇವೆ ಸಲ್ಲಿಸಿದ ಅಥವಾ ವಿಶೇಷ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ವಿಭಾಗದ ಮುಖ್ಯಸ್ಥರಿಗೆ / ಕಾರ್ಯವ್ಯವಸ್ಥಾಪಕರಿಗೆ ಮತ್ತು ಕೇಂದ್ರ ಕಚೇರಿಯ ಇಲಾಖಾ ಮುಖ್ಯಸ್ಥರಿಗೆ ಪ್ರತಿ ಪ್ರಕರಣದಲ್ಲಿ 500 ರೂ. ಮೊತ್ತದವರೆಗೆ ನಗದು ಬಹುಮಾನವನ್ನು ಮಂಜೂರು ಮಾಡಲು ಅಧಿಕಾರವಿತ್ತು.
ಹೀಗಾಗಿ ಪ್ರಸ್ತುತ ನೀಡುತ್ತಿರುವ ನಗದು ಪುರಸ್ಕಾರದ ಮೊತ್ತವನ್ನು ಹೆಚ್ಚಿಸುವುದು ಅವಶ್ಯವಿರುವುದರಿಂದ, ಶ್ಲಾಘನೀಯ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ನಗದು ಪುರಸ್ಕಾರದ ಮೊತ್ತವನ್ನು ಪ್ರತಿ ಪ್ರಕರಣದಲ್ಲಿ 500 ರೂ.ಗಳಿಂದ 2000 ರೂ. ಮೊತ್ತಕ್ಕೆ ಪರಿಷ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಪುರಸ್ಕಾರದ ಪರಿಷ್ಕರಿಸಿದ 2 ಸಾವಿರ ರೂ.ನ ಈ ಮೊತ್ತವನ್ನು ಮಂಜೂರು ಮಾಡಲು ವಿಭಾಗದ ಮುಖ್ಯಸ್ಥರು, ಕಾರ್ಯ ವ್ಯವಸ್ಥಾಪಕರು ಹಾಗೂ ಇಲಾಖಾ ಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ ಎಂದು ಆದೇಶದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಪರಿಷ್ಕರಿಸಿ ಆದೇಶ ಹೊರಡಿಸಿರುವ ಬಗ್ಗೆ ಎಲ್ಲ ಇಲಾಖಾ ಮುಖ್ಯಸ್ಥರು. ವಾಕರಸಾಸಂಸ್ಥೆ, ಕೇಂದ್ರ ಕಚೇರಿ, ಹುಬ್ಬಳ್ಳಿ. ಎಲ್ಲ ಕಾರ್ಯ ವ್ಯವಸ್ಥಾಪಕರು, ಪ್ರಾದೇಶಿಕ ಕಾರ್ಯಾಗಾರ, ಹುಬ್ಬಳ್ಳಿ.
ಪ್ರಾಂಶುಪಾಲರು, ವಾಕರಸಾಸಂಸ್ಥೆ, ಪ್ರಾದೇಶಿಕ ತರಬೇತಿ ಕೇಂದ್ರ, ಹುಬ್ಬಳ್ಳಿ / ಕಾರ್ಯನಿರ್ವಾಹಕ ಅಭಿಯಂತರರು, ಕಾಮಗಾರಿ ವಿಭಾಗ, ವಾಕರಸಾಸಂಸ್ಥೆ, ಬೆಳಗಾವಿ / ಹುಬ್ಬಳ್ಳಿ ಮತ್ತು ಎಂಡಿ ಅವರ ಆಪ್ತ ಕಾರ್ಯದರ್ಶಿಗಳು, ವಾಕರಸಾಸಂಸ್ಥೆ, ಕೇಂದ್ರ ಕಚೇರಿ, ಹುಬ್ಬಳ್ಳಿ ಅವರ ಮಾಹಿತಿಗಾಗಿ ಕಳುಹಿಸಲಾಗಿದೆ.