ಬೆಂಗಳೂರು: ದೇಶಭಕ್ತಿ ಎನ್ನುವುದು ಕಾಂಗ್ರೆಸ್ಸಿಗರ ರಕ್ತದ ಕಣಕಣದಲ್ಲೂ ಹರಿಯುತ್ತಿದೆ. ದೇಶಕ್ಕಾಗಿ ನೆತ್ತರು ಹರಿಸಿದ ವೀರ ಕಲಿಗಳಿಗೆ ಇದೋ ನನ್ನ ನಮನಗಳು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಾವಿರಾರು ಜನರ ತ್ಯಾಗ, ಬಲಿದಾನಗಳ ಫಲವಾಗಿ ಇಂದು ನಾವು ಸ್ವಾತಂತ್ರ್ಯದ ಸವಿಯುಣ್ಣುತ್ತಿದ್ದೇವೆ. ಪ್ರಾಣದ ಹಂಗು ತೊರೆದು ದಾಸ್ಯದ ಸಂಕೋಲೆಯಿಂದ ದೇಶವನ್ನು ಬಿಡುಗಡೆಗೊಳಿಸಲು ಹೋರಾಡಿದ ಎಲ್ಲ ಮಹಾನ್ ಚೇತನಗಳಿಗೂ ಗೌರವ ಪೂರ್ವಕ ನಮನ ಸಲ್ಲಿಸುತ್ತೇನೆ ಎಂದರು.
ಸ್ವತಂತ್ರ ಭಾರತದಲ್ಲಿ ಜೀವಿಸುತ್ತಿರುವ ನಮಗೆ ಸ್ವಾತಂತ್ರ್ಯ ಎಂಬುದು ಎಷ್ಟು ದುಬಾರಿಯಾದ ಸಂಗತಿ ಎಂಬುದು ಅರಿವಿಗೆ ಬರಲೇಬೇಕು. ಇಲ್ಲದಿದ್ದರೆ ನಮ್ಮ ಹಿರಿಯರ ತ್ಯಾಗ ಬಲಿದಾನಗಳಿಗೆ ಅರ್ಥವೇ ಇರುವುದಿಲ್ಲ. ಸ್ವಾತಂತ್ರ್ಯ ಎಂಬುದು ಮನುಷ್ಯರ ಜೀವಕ್ಕಿಂತ ಮಿಗಿಲು ಎಂದು ಸ್ವಾತಂತ್ರ್ಯ ಹೋರಾಟಗಾರರು ಭಾವಿಸಿದ್ದರು. ಆದ್ದರಿಂದಲೇ ಎಲ್ಲ ಮಹನೀಯರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಅವರ ತ್ಯಾಗ ಬಲಿದಾನಗಳನ್ನು ದೇಶವು ಶ್ರದ್ಧಾಪೂರ್ವಕವಾಗಿ ಸ್ಮರಿಸಲೇಬೇಕು.
ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ನಮ್ಮ ಜನರಿಗೆ ಅರ್ಥವಾಗಿರುವುದರಿಂದ ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಜನರೇ ಸಾಬೀತು ಮಾಡಿದ್ದಾರೆ.
ವಸಾಹತುವಾದ ಮತ್ತು ಸಾಮ್ರಾಜ್ಯವಾದಗಳು ಜೀವಂತವಾಗಿದ್ದಾಗ, ಸ್ವಾತಂತ್ರ್ಯ ಗಳಿಸಿದರೆ ಸಾಕು ಅಭಿವೃದ್ಧಿ ಎಂಬುದು ತನ್ನಿಂದ ತಾನೆ ಸಾಧ್ಯವಾಗುತ್ತದೆ ಎಂದು ಭಾವಿಸಿ ನಮ್ಮ ಹಿರಿಯರು ಹೋರಾಟ ಮಾಡಿದ್ದರು. ಇದು ಸತ್ಯ ಕೂಡ ಆಗಿತ್ತು. ಸ್ವಾತಂತ್ರ್ಯವೇನೊ ಲಭಿಸಿತು. ಆದರೆ ನವ ಉದಾರವಾದಿ ನೀತಿಗಳು ಜಗತ್ತಿನಾದ್ಯಂತ ಪ್ರಾರಂಭವಾದ ಮೇಲೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಾ ಹೋಯಿತು.
ಇಂದು ನಮ್ಮಲ್ಲಿಯೇ ಶೇ.10 ರಷ್ಟು ಜನ ಶೇ.78 ಕ್ಕಿಂತ ಹೆಚ್ಚಿನ ಪ್ರಮಾಣದ ಸಂಪತ್ತಿನ ಮೇಲೆ ಯಜಮಾನಿಕೆ ಹೊಂದಿದ್ದಾರೆ. ಬ್ರಿಟಿಷ್ ಭಾರತದಲ್ಲಿ ನಮ್ಮ ದೇಶದ ಸಂಪತ್ತನ್ನು ಬ್ರಿಟಿಷರು ಹೊತ್ತೊಯ್ದರು. ಆದರೆ ಇಂದು ನಮ್ಮಲ್ಲಿ ಕೆಲವೇ ದೊಡ್ಡ ಬಂಡವಾಳಿಗರ ಬಳಿ ಶೇಖರಣೆಗೊಳ್ಳುತ್ತಿದೆ. ಈ ರೀತಿಯಾದರೆ ಅಭಿವೃದ್ಧಿ ಸಾಧ್ಯವೆ? ಕುವೆಂಪು ಅವರು ತಮ್ಮದೊಂದು ಪದ್ಯದಲ್ಲಿ:
“ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೆ ಹದಹಾಕಿ ತಿವಿದರದು ಹೂವೆ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೆಲ್ಲ ಮನಗಂಡೇ ನಾವು ಸಂಪತ್ತಿನ ಸಂಗ್ರಹ ಮತ್ತು ಹಂಚಿಕೆ ಹಾಗೂ ಮರುಹಂಚಿಕೆಗಳಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುತ್ತಿದ್ದೇವೆ. ಅದಕ್ಕಾಗಿಯೆ ನಾವು ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಪ್ರಮೇಯವಾದ ಅಭಿವೃದ್ಧಿಯೆ ಸ್ವಾತಂತ್ರ್ಯ ಎಂಬುದರಲ್ಲಿ ನಂಬಿಕೆಯಿಟ್ಟು ಈ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬ್ರಿಟಿಷರು ಭಾರತದ ಸ್ಥಳೀಯ ಉತ್ಪಾದನಾ ವಿಧಾನಗಳ ಕೈ ಬೆರಳುಗಳನ್ನು ಕತ್ತರಿಸಿ ಹಾಕಿ ಮಾರುಕಟ್ಟೆಯ ಮೇಲೆ ಯಜಮಾನಿಕೆಯನ್ನು ಸಾಧಿಸಿದ್ದರು. ಇದರಿಂದಾಗಿ ದೇಶದ ಆರ್ಥಿಕತೆ ಪೂರ್ತಿ ಪಾತಾಳಕ್ಕೆ ಕುಸಿದಿತ್ತು. ಬ್ರಿಟಿಷರು ದೇಶದ ಜನರ ಮೇಲೆ ಸಾಲವನ್ನು, ಕೈಗಳಿಗೆ ನಿರುದ್ಯೋಗವನ್ನು, ಹೊಟ್ಟೆ ತುಂಬ ಹಸಿವನ್ನು ಬಳುವಳಿಯಾಗಿ ಕೊಟ್ಟು ಹೋಗಿದ್ದರು ಎಂದರು.
ಇಂಥ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾರ್ಯಯೋಜನೆಗಳು ದೇಶವನ್ನು ಪಾತಾಳದಿಂದ ಮೇಲೆತ್ತಲು ಸಾಧ್ಯ ಮಾಡಿದವು. ಇವರೆಲ್ಲರ ಕೊಡುಗೆಯಿಂದ ಭಾರತವು ಇಂದು ಜಗತ್ತಿನಲ್ಲಿ ಅತ್ಯಂತ ಪ್ರಬಲ ದೇಶವಾಗಿ ಬೆಳೆದಿದೆ ಎಂದು ಹೇಳಿದರು.
Gandhi’s talisman ಎಂದು ಹೆಸರಾದ ಚಿಂತನೆಯ ನೆರಳಲ್ಲೇ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಯಾವುದೇ ಯೋಜನೆ ಜಾರಿಗೊಳಿಸುವಾಗ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಇದರಿಂದ ಅನುಕೂಲವಾಗುವುದೇ? ಸಾಮಾಜಿಕ ನ್ಯಾಯ ಪಾಲನೆಯಾಗಿದೆಯೇ? ಎಂದು ಯೋಚಿಸಿಯೇ ಮುಂದಡಿಯಿಡುವುದು ನಮ್ಮ ಆಡಳಿತದ ಅಂತಃಸತ್ವವಾಗಿದೆ ಎಂದರು.