ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಚಾಲನಾ ಸಿಬ್ಬಂದಿ ಮೇಲೆ ಆಗುತ್ತಿರುವ ಹಲ್ಲೆಯನ್ನು ತಡೆಯುವ ನಿಟ್ಟಿನಲ್ಲಿ ನಿಗಮಗಳ ಆಡಳಿತ ಮಂಡಳಿ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಹೈ ಕೋರ್ಟ್ ಮೆಟ್ಟಿಲೇರುವುದಾಗಿ ವಕೀಲ ಎಚ್.ಬಿ.ಶಿವರಾಜು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಾಲನಾ ಸಿಬ್ಬಂದಿ ಮೇಲೆ ಕೆಲ ಕಿಡಿಗೇಡಿಗಳು ಯಾವುದೇ ಕಾನೂನಿನ ಭಯವಿಲ್ಲದೆ ಹಲ್ಲೆ ಮಾಡುತ್ತಿದ್ದಾರೆ. ಅಂಥವರ ವಿರುದ್ಧ ಕೇಸ್‌ಗಳು ಕೂಡ ದಾಖಲಾಗುತ್ತಿವೆ. ಆದರೂ, ಹಲ್ಲೆ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇದರಿಂದ ನೌಕರರು ಕರ್ತವ್ಯ ಮಾಡುವುದಕ್ಕೆ ತುಂಬ ತೊಂದರೆ ಆಗುತ್ತಿದೆ.
ಹೀಗಾಗಿ ನೌಕರರ ಮೇಲೆ ಆಗುತ್ತಿರುವ ಹಲ್ಲೆ ಪ್ರಕರಣಗಳನ್ನು ತಡೆಯುವ ಮೂಲಕ ಅವರಿಗೆ ಸೂಕ್ತ ತಕ್ಷಣೆ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ನಿಗಮಗಳ ಆಡಳಿತ ಮಂಡಳಿಗಳು ಕ್ರಮಕ್ಕೆ ಮುಂದಾಗಬೇಕು. ಆದರೆ, ಇಲ್ಲಿ ನೌಕರರ ರಕ್ಷಣೆಗೆ ನಿಲ್ಲುವ ಬದಲಿಗೆ ಹಲ್ಲೆ ಮಾಡುವವರ ಪರವಾಗಿಯೇ ಅಧಿಕಾರಿಗಳು ನಿಲುವು ತಾಳುತ್ತಿರುವ ಆರೋಪ ಕೇಳಿ ಬರುತ್ತಿದೆ. ಇದರಿಂದ ನೌಕರರು ಹಲ್ಲೆಗೊಳಗಾದರು ಅವರಿಗೆ ರಕ್ಷಣೆ ಇಲ್ಲದಂತಾಗಿದೆ.
ಈ ಹಿನ್ನೆಲೆಯಲ್ಲಿ ನೌಕರರಿಗೆ ಈ ರೀತಿಯ ಹಲ್ಲೆ ಮಾಡುವವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಮುಂದೆ ಈ ರೀತಿಯ ಹಲ್ಲೆ ಮಾಡದಂತೆ ಎಚ್ಚರಿಕೆ ಮತ್ತು ಕಾನೂನಿನ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘದಿಂದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಕಾನೂನು ಸಲಹೆಗಾರರು ಹಾಗೂ ಸುಪ್ರೀಂ ಮತ್ತು ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ತಿಳಿಸಿದ್ದಾರೆ.
ಪ್ರಸ್ತುತ ನೌಕರರ ಮೇಲೆ ಆಗಿರುವ ಹಲ್ಲೆ ಸಂಬಂಧ ಎಫ್‌ಐಆರ್ ಆಗಿರುವ ಎಲ್ಲ ದಾಖಲೆಗಳನ್ನು ತರಿಸಿಕೊಂಡು ಹೈ ಕೋರ್ಟ್‌ನಲ್ಲಿ ಅರ್ಜಿಹಾಕಲಾಗುವುದು. ಈ ಮೂಲಕ ಚಾಲನಾ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುವ ಜವಾಬ್ದಾರಿ ನಿಗಮಗಳ ಮೇಲಿದೆ ಎಂಬುದನ್ನು ಮನಗಾಣುವಂತೆ ಮಾಡುವ ಪ್ರಯತ್ನದ ಹಿನ್ನೆಲೆಯಲ್ಲಿ ನಾವು ಕೋರ್ಟ್ ಮೆಟ್ಟಿಲೇರುತ್ತಿದ್ದೇವೆ ಎಂದು ವಕೀಲ ಶಿವರಾಜು ತಿಳಿಸಿದ್ದಾರೆ.
ಇನ್ನು ಸಾರ್ವಜನಿಕರೇ ತಪ್ಪೆಸಗಿದರೂ ಕೂಡ ಚಾಲನಾ ಸಿಬ್ಬಂದಿಗೆ ತನಿಖಾಧಿಕಾರಿಗಳು ಮೆಮೋ ನೀಡುವುದು ಬಳಿಕ ವಿಭಾಗೀಯ ನಿಯಂತ್ರಣಾಧಿಕಾರಿಗಳು ನಾಮ್ ಕೇ ವಾಸ್ತೆ ಎಂಬಂತೆ ಅವರಿಂದ ಹೇಳಿಕೆ ಪಡೆದು ನಿಮ್ಮ ಹೇಳಿಕೆ ಸಮಂಜಸವಾಗಿಲ್ಲ ಎಂದು ಅವರನ್ನು ಅಮಾನತುಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಇಲ್ಲಿ ಜನರೇ ತಪ್ಪು ಮಾಡಿದರು ಅವರನ್ನು ಬಿಟ್ಟು ಕಳುಹಿಸಿ ನೌಕರರಿಗೆ ದಂಡ, ಅಮಾನತಿನ ಶಿಕ್ಷೆ ಬಳಿಕ ಡಿಪೋಗಳನ್ನು ಬದಲಾವಣೆ ಮಾಡುವ ಕೆಲಸವು ನಡೆಯುತ್ತಿದೆ. ಇದಕ್ಕೆಲ ಕಡಿವಾಣ ಬೀಳಬೇಕಿದೆ ಎಂದು ವಕೀಲರು ತಿಳಿಸಿದ್ದಾರೆ.
ಈ ಸಂಬಂಧ ನಾಳೆ (ಆ.17) ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಅವರಿಗೂ ಕೂಡ ಮನವಿ ಪತ್ರ ಸಲ್ಲಿಸಲಾಗುವುದು, ಈ ವೇಳೆ ಸಚಿವರಿಗೆ ನೌಕರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸಮಗ್ರವಾಗಿ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.