ವಿಜಯಪುರ: ಮೇಲಧಿಕಾರಿಗಳಿಗೆ ಭೇಟಿಯಾಗುವ ಸಂದರ್ಭದಲ್ಲಿ ಹೊಗುಚ್ಛ, ಹಾರ ಇತ್ಯಾದಿ ನೀಡುವ ಬದಲಾಗಿ ಕಿಂಗ್ ಸೈಜ್ ನೋಟ್‌ಬುಕ್ ಅಥವಾ ಸಾಮಾನ್ಯ ಜ್ಞಾನ ಪುಸ್ತಕಗಳನ್ನು ನೀಡಬೇಕು ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.
ಮೇಲಧಿಕಾರಿಗಳನ್ನು ಭೇಟಿ ಮಾಡಲು ಬಂದವೇಳೆ ಃಊ ಗುಚ್ಛ ನೀಡುವುದು ರೂಢಿ ಇದರಿಂದ ಯಾವುದೇ ಪ್ರಯೋಜನವಾಗದು. ಹೀಗಾಗಿ ಇದರ ಬದಲಿಗೆ ನೋಟ್ ಬುಕ್ ಇಲ್ಲ ಜ್ಞಾನ ವೃದ್ಧಿಯಾಗುವಂತಹ ಪುಸ್ತಕಗಳನ್ನು ನೀಡಿದರೆ ಬಡವರ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಈ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಈ ಆದೇಶದಿಂದ ಹರ್ಷಗೊಂಡಿರುವ ಕೆಳ ಹಂತದ ಅಧಿಕಾರಿಗಳು ನಮ್ಮ ಡಿಸಿಯವರು ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹಾಡಿ ಹೊಗಳುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಲ್ಲೇನಿದೆ: ಮೇಲಧಿಕಾರಿಗಳು ತಮ್ಮ ಅಧೀನ ಕಚೇರಿಗಳಿಗೆ ಚೀಟಿ ನೀಡಿದಾಗ ಅಥವಾ ಅಧಿಕಾರಿ ನೌಕರರು ಮೇಲಧಿಕಾರಿಗಳನ್ನು ಭೇಟಿಯಾಗಲು ಕಚೇರಿಗೆ ಬಂದಾಗ ಅಧಿಕಾರಿಗಳಿಗೆ ಹೂಗುಚ್ಛ, ಹಾರ, ಹಣ್ಣಿನ ಬುಟ್ಟಿ, ಶಾಲು ಇತ್ಯಾದಿ ನೀಡುವುದು ಸ್ವಾಭಾವಿಕವಾಗಿದೆ.
ಇದರ ಬದಲಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಅಧಿಕಾರಿ/ನೌಕರರು ಕಿಂಗ್ ಸೈಜಿನ ನೋಟ್ ಬುಕ್, ಅಥವಾ ಸಾಮಾನ್ಯ ಜ್ಞಾನ/ ಮಹಾನ್ ಪುರುಷರ ಸ್ವತಂತ್ರ ಹೋರಾಟಗಾರರ ವಿಜ್ಞಾನಿಗಳ/ಎನ್ ಸೈಕ್ಲೋಪೀಡಿಯಾ, ನಿಘಂಟು ಇತ್ಯಾದಿ ಪುಸ್ತಕಗಳನ್ನ ನೀಡಿ ಅಧಿಕಾರಿಗಳನ್ನು, ಗೌರವಿಸಬಹುದಾಗಿದೆ.
ಹೀಗೆ ಸಂಗ್ರಹವಾದ ನೋಟ್ ಬುಕ್ ಹಾಗೂ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಅಥವಾ ಬಡ ಕುಟುಂಬದ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವುದರಿಂದ ಜನ ಸಾಮಾನ್ಯರ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಬಹುದಾಗಿದೆ.
ಅದುದರಿಂದ ಎಲ್ಲ ಅಧಿಕಾರಿಗಳು ತಮ್ಮ ಅಧೀನ ಎಲ್ಲ ಕಚೇರಿಗಳ ಎಲ್ಲ ಅಧಿಕಾರಿ/ಸಿಬ್ಬಂದಿ ವರ್ಗದವರಿಗೆ ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲು ಬರುವ ಸಾರ್ವಜನಿಕರಿಗೂ ಸಹ ಈ ಮೇಲಿನಂತೆ ತಿಳಿವಳಿಕೆಯನ್ನು ನೀಡಲು ಮತ್ತು ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸೂಚಿಸಿದೆ. ಸಂಗ್ರಹವಾದ ನೋಟ್ ಬುಕ್ ಹಾಗೂ ಪುಸ್ತಕಗಳನ್ನು ಬಡ ಕುಟುಂಬದ ಶಾಲಾವಿದ್ಯಾರ್ಥಿಗಳಿಗೆ ಮತ್ತು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಲು ತಿಳಿಸಿದೆ ಎಂದು ಆದೇಶ ಹೊರಡಿಸಿದ್ದಾರೆ.
ಅಷ್ಟೇ ಅಲ್ಲದೆ ಸೂಕ್ತ ಕ್ರಮಕ್ಕಾಗಿ ವಿಜಯಪುರ ಜಿಲ್ಲೆಯ ಎಲ್ಲ ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಳುಹಿಸಿರುವುದಾಗಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಖಚಿತಪಡಿಸಿಕೊಂಡಿದ್ದಾರೆ.