ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಕೆಲ ಮಹಿಳಾ ಪ್ರಯಾಣಿಕರು ಮಾಡುತ್ತಿರುವ ತಪ್ಪಿಗೆ ನಿರ್ವಾಹಕರು ದಂಡ ಕಟ್ಟುವುದು, ಅಮಾನತಿನಂತಹ ಶಿಕ್ಷೆ ಅನುಭವಿಸುತ್ತಿದ್ದಾರೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯದ ಮಹಿಳೆಯರು ಬಸ್‌ಗಳಲ್ಲಿ ಓಡಾಡುವುದು ಹೆಚ್ಚಾಗಿದ್ದು, ಅವರು ಕರ್ನಾಟಕದ ಮಹಿಳೆಯರೆ ಎಂದು ಖಚಿತ ಪಡಿಸಿಕೊಳ್ಳುವುದಕ್ಕೆ ಆಧಾರ್ ಸೇರಿದಂತೆ ಸರ್ಕಾರ ನೀಡಿರುವ ಇತರ ದಾಖಲೆಗಳನ್ನು ತೋರಿಸಬೇಕಿದೆ.
ಈ ನಡುವೆ ಕೆಲವರು ಆಧಾರ್ ಸಾಫ್ಟ್ ಕಾಪಿಯನ್ನು ಮೊಬೈಲ್‌ನಲ್ಲಿ ತೋರಿಸಿ ಟಿಕೆಟ್ ಪಡೆದುಕೊಳ್ಳುತ್ತಾರೆ. ಬಳಿಕ ಅವರು ಬಸ್ ಇಳಿಯುವ ವೇಳೆಗೆ ಟಿಕೆಟ್ ಚೆಕ್ ಮಾಡಲು ನಿಗಮಗದ ತನಿಖಾ ಸಿಬ್ಬಂದಿ ಬಸ್‌ಹತ್ತುತ್ತಾರೆ. ಈ ವೇಳೆ ಆಧಾರ್ ಸಾಫ್ಟ್ ಕಾಪಿ ತೋರಿಸುವುದಕ್ಕೆ ಮೊಬೈಲ್ ಲೋ ಬ್ಯಾಟರಿಯಿಂದ ಸ್ವಿಚ್‌ಆಫ್ ಆಗುತ್ತದೆ. ಸ್ವಿಚ್‌ಆಫ್ ಆಗುಗಿರುವ ಬಗ್ಗೆ ಮಹಿಳೆಯರು ಹೇಳುತ್ತಾರೆ. ಅವರು ಹೇಳಿದ ಕೂಡಲೆ ಅವರನ್ನು ಬಿಟ್ಟು ಕಳುಹಿಸುತ್ತಾರೆ. ಆದರೆ, ನಿರ್ವಾಹಕರನ್ನು ಹಿಡಿದುಕೊಂಡು ನೀವು ಆ ಮಹಿಳೆ ಯಾವುದೇ ದಾಖಲೆ ತೋರಿಸದಿದ್ದರು ಟಿಕೆಟ್ ಕೊಟ್ಟಿದ್ದೀರಿ ಎಂದು ಮೆಮೋ ಕೊಟ್ಟು ಬಳಿಕ ಅಮಾನತು ಮಾಡುತ್ತಿದ್ದಾರೆ.
ಇನ್ನು ಇಲ್ಲಿ ಕೆಲ ಮಹಿಳೆಯರು ಮಾಡಿದ ತಪ್ಪಿಗೆ ನಿರ್ವಾಹಕರು ಏನು ಮಾಡಬೇಕು? ಲೈನ್‌ಚೆಕ್‌ಗೆ ಹತ್ತುವ ತನಿಖಾಧಿಕಾರಿಗಳು ದಾಖಲೆ ತೋರಿಸದ ಮಹಿಳೆಯರ ವಿರುದ್ಧ ಕೇಸ್ ದಾಖಲಿಸಿಕೊಂಡು ಅವರಿಂದ ದಂಡ ಕಟ್ಟಿಸಿಕೊಳ್ಳಬೇಕು, ಅದನ್ನು ಬಿಟ್ಟು ನಿರ್ವಾಹಕರನ್ನು ಹರಕೆಯ ಕುರಿ ಮಾಡಿ ಅವರಿಗೆ ಮೆಮೋ ಕೊಟ್ಟು ಅಮಾನತು ಮಾಡಿಸುವುದು ಎಷ್ಟರ ಮಟ್ಟಿಗೆ ಸರಿ?
ಈ ಬಗ್ಗೆ ಹೇಳಬೇಕೆಂದರೆ ಇಲ್ಲಿ ತಪ್ಪು ಮಾಡುವ ಮಹಿಳೆಯರಿಗೆ ನಿಗಮದಿಂದ ಯಾವುದೇ ಶಿಕ್ಷೆಯಾಗುವುದಿಲ್ಲ. ಆದರೆ, ತಪ್ಪು ಮಾಡದ ನಿರ್ವಾಹಕರಿಗೆ ಶಿಕ್ಷೆಯಾಗುತ್ತಿದೆ. ಈ ಬಗ್ಗೆ ನಾಲ್ಕೂ ನಿಗಮಗಳ ಎಂಡಿಗಳಿಗೆ ನಿರ್ವಾಹಕರು ಹಲವಾರು ಬಾರಿ ಮೌಖಿಕವಾಗಿ ಹಾಗೂ ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ. ಆದರೂ ಏನು ಕ್ರಮ ಜರುಗಿಸಿಲ್ಲ ಈ ಎಂಡಿಗಳು.
ಈ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಈ ಮೌನದಿಂದ ನಿರ್ವಾಹಕರು ಇತ್ತ ಪ್ರಯಾಣಿಕ ಕೆಲ ಮಹಿಳೆಯರಿಂದ ಮತ್ತು ಲೈನ್‌ಚೆಕ್ ಮಾಡುವ ತನಿಖಾಧಿಕಾರಿಗಳಿಗೆ ನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. ಇನ್ನಾದರೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಎಂಡಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಪ್ಪು ಮಾಡಿದವರಿಗೆ ಶಿಕ್ಷೆ, ದಂಡ ಕಟ್ಟಿಸುವತ್ತ ಗಮನ ಹರಿಸಬೇಕಿದೆ.
ಒಂದೇ ಆಧಾರ್ ಸಂಖ್ಯೆಯುಳ್ಳ ಎರಡೂ ರಾಜ್ಯಗಳ ವಿಳಾಸವಿರುವ ಆಧಾರ್: ಇನ್ನು ಕರ್ನಾಟಕಕ್ಕೆ ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಮಹಿಳೆಯರು ಒಂದೇ ಆಧಾರ್ ಸಂಖ್ಯೆಯ ಎರಡೂ ರಾಜ್ಯಗಳ ವಿಳಾಸವಿರುವ ಆಧಾರನ್ನು ಇಟ್ಟುಕೊಂಡಿರುವುದು ಕಂಡು ಬಂದಿದೆ. ಮೊನ್ನೆ ಮಹಾರಾಷ್ಟ್ರದ ಮಹಿಳೆಯೊಬ್ಬರು ಸಾರಿಗೆ ಬಸ್‌ನಲ್ಲಿ ಉಚಿತ ಟಿಕೆಟ್ ಪಡೆದುಕೊಳ್ಳುವುದಕ್ಕೆ ಕರ್ನಾಟಕ ರಾಜ್ಯದ ವಿಳಾಸವಿರುವ ಆಧಾರ್ ತೋರಿಸಿದ್ದಾರೆ. ಬಳಿಕ ತನಿಖಾಧಿಕಾರಿಗಳು ಚೆಕ್ ಮಾಡುವಾಗ ಗಾಬರಿಯಲ್ಲಿ ಮಹಾರಾಷ್ಟ್ರ ರಾಜ್ಯದ ವಿಳಾಸವಿರುವ ಅದೇ ಆಧಾರ್ ಸಂಖ್ಯೆಯ ಮತ್ತೊಂದು ಆಧಾರ್ ಕಾರ್ಡ್ ತೋರಿಸಿದ್ದಾರೆ.
ಈ ಬಗ್ಗೆ ಆ ಮಹಿಳೆಯನ್ನು ಪ್ರಶ್ನಿಸಿ ಆಕೆಗೆ ದಂಡಹಾಕಿ ಬುದ್ದಿ ಕಲಿಸುವ ಬದಲಿಗೆ ಆಕೆಯನ್ನು ಬಿಟ್ಟು ಕಳುಹಿಸಿ ನಿರ್ವಾಹಕರಿಗೆ ಕಾರಣ ಕೇಳಿ ಮೆಮೋ ನೀಡಿದ್ದಾರೆ. ಇಲ್ಲಿ ನಿರ್ವಾಹಕರ ತಪ್ಪೇನಿದೆ. ಆಕೆ ಮಾಡಿರುವ ಮೋಸ ಅಥವಾ ಕಾನೂನು ಬಾಹಿರ ನಡೆಗೆ ಆಕೆಗೆ ಶಿಕ್ಷೆ ಕೊಡಬೇಕು. ಆದರೆ ಇಲ್ಲಿ ಶಿಕ್ಷೆ ಕೊಟ್ಟಿದ್ದು ಅಮಾಯಕ ನಿರ್ವಾಹಕರಿಗೆ. ಇದು ಎಷ್ಟರ ಮಟ್ಟಿಗೆ ಸರಿ?
ಇನ್ನು ಪ್ರತಿಯೊಂದಕ್ಕೂ ನಿರ್ವಾಹಕರನ್ನೇ ಹೊಣೆಗಾರರನ್ನಾಗಿ ಮಾಡಿದರೆ ಪ್ರಯಾಣಿಕರಿಗೆ ಜವಾಬ್ದಾರಿಯಿಲ್ಲವೇ? ಅಥವಾ ಸಂಸ್ಥೆಯ ಎಸಿ, ಫ್ಯಾನ್ ಕೆಳಗೆ ಕುಳಿತುಕೊಂಡು ಹರಟೆ ಹೊಪಡೆಯುವ ಕೆಳ ಹಂತದಿಂದ ಉನ್ನತ ಮಟ್ಟದ ಕೆಲ ಅಧಿಕಾರಿಗಳಿಗೆ ಈ ಜವಾಬ್ದಾರಿ ಇಲ್ಲವೇ? ಯಾವ ಕಡೆ ಹೋದರೂ ಇಲ್ಲಿಯವರೆಗೂ ಚಾಲನಾ ಸಿಬ್ಬಂದಿಗೆ ಶಿಕ್ಷೆಯಾಗುತ್ತಿದೆಯೇ ಹೊರತು ಇಂಥ ಕೆಲಸಕ್ಕೆ ಬಾರದ ಹರಟೆ ಹೊಡೆಯುವ ಅಧಿಕಾರಿಗಳಿಗೆ ಶಿಕ್ಷೆ ಆಗಿರುವ ಉದಾಹರಣೆಯನ್ನು ಈ ನಾಲ್ಕೂ ನಿಗಮಗಳಲ್ಲಿ ಈವರೆಗೂ ಕೇಳೆ ಇಲ್ಲ, ನೋಡಿಯೂ ಇಲ್ಲ.
ಒಟ್ಟಾರೆ ಚಾಲನಾ ಸಿಬ್ಬಂದಿಗಳಿಗೆ ಶಿಕ್ಷೆ ಕೊಡುವ ಅಧಿಕಾರ ನಮ್ಮ ಕೈಯಲ್ಲಿ ಇದೆ ಎಂದು ಕೆಲ ಲಂಚಕೋರ ಅಧಿಕಾರಿಗಳು ನೌಕರರು ಮಾಡದ ತಪ್ಪಿಗೆ ಶಿಕ್ಷೆ ವಿಧಿಸಿ ತಮ್ಮ ಬಕೆಟ್‌ಗಳನ್ನು ಹಿಂದಿನಿಂದ ಬಿಟ್ಟು ಅಕ್ರಮವಾಗಿ ಗಂಟು ಮಾಡಿಕೊಂಡು ಇತ್ತ ನೌಕರರನ್ನು ಬಲಿಪಶು ಮಾಡುತ್ತಿದ್ದಾರೆ.
ಇದನ್ನು ಕೇಳಬೇಕಾದ ಸಂಘಟನೆಗಳ ಮುಖಂಡರೆನಿಸಿಕೊಂಡವರು ತಮ್ಮ ತಮ್ಮಲ್ಲೇ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆದು ಕೊಂಡು ನೌಕರರಿಗೆ ಪ್ರಯೋಜನವಿಲ್ಲದ ವಿಷಯಗಳನ್ನು ಚರ್ಚೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟೈಂ ವೆಸ್ಟ್ ಮಾಡಿಕೊಂಡು ಕುಳಿತಿದ್ದಾರೆ. ಇದಕ್ಕೆ ಕೆಲ ನೌಕರರೂ ಕೂಡ ಬ್ಯಾಟ್ ಬೀಸುತ್ತಿದ್ದಾರೆ. ಇದು ದುರಂತವೇ…