ಬೆಂಗಳೂರು: ಶಕ್ತಿಯೋಜನೆ ಜೂನ್ 11- 2023ರಿಂದ ಜಾರಿಗೆ ಬಂದಿದ್ದು, ಅಲ್ಲಿಂದ ಈವರೆಗೂ ನಾಡಿನ ಬಹುತೇಕ ಎಲ್ಲ ಮಹಿಳೆಯರು ಕೂಡ ಈ ಯೋಜನೆಯ ಲಾಭ ಪಡೆದಿದ್ದಾರೆ ಪಡೆಯುತ್ತಲೂ ಇದ್ದಾರೆ. ಆದರೆ, ಇದರಿಂದ ಸಾರಿಗೆಯ ನಾಲ್ಕೂ ನಿಗಮಗಳ ಚಾಲನಾ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.
ಇದು ಅಕ್ಷರ ಸಹ ಸತ್ಯವಾಗಿದ್ದು, ಈ ಉಚಿತ ಪ್ರಯಾಣ ಸೌಲಭ್ಯ ಸಿಕ್ಕಿರುವುದರಿಂದ ಮಹಿಳೆಯರು ದೇವಾಲಯಗಳು ಸೇರಿದಂತೆ ಇತರ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಾ ಉಚಿತ ಸೌಲಭ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಸೌಲಭ್ಯ ಜಾರಿಗೆ ಬಂದು ಎರಡು ತಿಂಗಳ ಮೇಲಾಗಿದೆ.
ಇತ್ತ ಸಾರಿಗೆ ಚಾಲನಾ ಸಿಬ್ಬಂದಿ ಅದರಲ್ಲೂ ಕಂಡಕ್ಟರ್‌ಗಳಂತು ಟಿಕೆಟ್ ವಿರಣೆಗೆ ಇರುವ ನಿಯಮಗಳನ್ನು ಪಾಲಿಸಿ ಪಾಲಿಸಿ ಬೇಸತ್ತು ಹೋಗುತ್ತಿದ್ದಾರೆ. ಇತ್ತ ಮಹಿಳೆಯರ ಐಡಿ ಕಾರ್ಡ್‌ಗಳನ್ನು ಸರಿಯಾಗಿ ಪರಿಶೀಲನೆ ಮಾಡಬೇಕು. ಅತ್ತ ಟಿಕೆಟ್ ಕೂಡ ವಿತರಿಸಬೇಕು. ಇದರಲ್ಲಿ ಯಾವುದಾದರೊಂದು ತಪ್ಪಾಗಿದ್ದರೂ ಆ ತಪ್ಪನ್ನು ಕಂಡಕ್ಟರ್‌ಗಳ ಮೇಲೆ ಹಾಕಿ ಅಮಾನತು ಮಾಡಲಾಗುತ್ತಿದೆ. ಇದರಿಂದ ನಿರ್ವಾಹಕರು ಹಡಕತ್ತರಿಯಲ್ಲಿ ಸಿಕ್ಕಿಕೊಂಡಂತ್ತಾಗಿದೆ.
ಇನ್ನು ಮಹಿಳೆಯರು ಶಕ್ತಿ ಯೋಜನೆ ಎಂಜಾಯ್ ಮಾಡುತ್ತಿದ್ದು, ನೌಕರರಿಗೆ ಆಗುತ್ತಿರುವ ಕಿರಿಕಿರಿಗೆ ಕಿವಿಗೊಡುತ್ತಿಲ್ಲ. ಹೀಗಾಗಿ ಈ ಯೋಜನೆ ಕುರಿತಂತೆ ರಾಜ್ಯ ಸರ್ಕಾರ ಹೊಸ ನಿಯಮ ವೊಂದನ್ನು ಜಾರಿಗೆ ತರಲು ಹೊರಟಿದೆ. ಅದೇನೆಂದರೆ ಮಹಿಳೆಯರಿಗೆ ಟ್ಯಾಪ್ ಕಾರ್ಡ್ (Tap Card) ನೀಡಬೇಕು ಎಂದು ನಿರ್ಧರಿಸಿದೆ.
ಇದರಿಂದ ಕಂಡಕ್ಟರ್‌ಗಳಿಗೆ ಸ್ವಲ್ಪಮಟ್ಟಿಗಾದರೂ ಒತ್ತಡವನ್ನು ಕಡಿಮೆ ಮಾಡಬೇಕು ಎಂಬುವುದು ಈ ಹೊಸ ನಿಯಮದ ಗುರಿಯಾಗಿದೆ ಎಂದು ಹೇಳಲಾಗುತ್ತಿದೆ. ಹೌದು! ಬಸ್‌ನಲ್ಲಿ ಫ್ರೀಯಾಗಿ ಓಡಾಡುತ್ತಿರುವ ಮಹಿಳೆಯರ ಸಂಖ್ಯೆ ದಿನದಿಂದ ದಿನಕ್ಕೆ ವಾರದಿಂದ ವಾರಕ್ಕೆ ಹೆಚ್ಚಾಗುತ್ತಲೇ ಇದೆ.
ಹೀಗಾಗಿ ಪ್ರತಿಯೊಬ್ಬ ಮಹಿಳೆಯ ಐಡೆಂಟಿಟಿ ಪ್ರೂಫ್ (ID Proof) ಚೆಕ್ ಮಾಡುವುದಕ್ಕೆ ಟಿಕೆಟ್ ಕೊಡುವುದಕ್ಕೆ ಕಂಡಕ್ಟರ್‌ಗಳಿಗೆ ಭಾರಿ ತ್ರಾಸವಾಗುತ್ತಿದೆ. ಜತೆಗೆ ಬೇರೆ ರಾಜ್ಯದ ಮಹಿಳೆಯರು ಬಸ್‌ಗೆ ಬಂದರೆ ಅವರಿಗೆ ಟಿಕೆಟ್ ವಿತರಿಸಬೇಕು. ಹೊರ ರಾಜ್ಯದಿಂದ ಬರುತ್ತಿರುವ ಕೆಲ ಮಹಿಳೆಯರು ನಕಲಿ ಆಧಾರ್ ತೋರಿಸಿ ಟಿಕೆಟ್ ಪಡೆಯುತ್ತಿರುವುದು ಇದೆ. ಈ ಎಲ್ಲ ತೊಂದರೆಗಳು ಆಗುತ್ತಿರುವುದರಿಂದ ಸರ್ಕಾರ ಈಗ ಮಹಿಳೆಯರಿಗೆ ಟ್ಯಾಪ್ ಸ್ಮಾರ್ಟ್ ಕಾರ್ಡ್ ವಿತರಿಸುವ ನಿರ್ಧಾರ ಮಾಡಿದೆ.
ಟಿಕೆಟ್ ಕೊಡುವುದು, ಐಡಿ ಪರಿಶೀಲನೆ ಇದೆಲ್ಲವೂ ನಿರ್ವಾಹಕರಿಗೆ ಹೆಚ್ಚಿನ ಕೆಲಸವೇ ಆಗಿದೆ. ಹಾಗಾಗಿ ಮಹಿಳೆಯರಿಗೆ ನಾರ್ಮಲ್ ಸ್ಮಾರ್ಟ್ ಕಾರ್ಡ್ ಕೊಡುವುದಕ್ಕಿಂತ ಟ್ಯಾಪ್ ಅಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ಕೊಟ್ಟರೆ ಒಳ್ಳೆಯದು ಎನ್ನುವ ಚಿಂತೆ ನಡೆಯುತ್ತಿದೆ.
ಈ ಟ್ಯಾಪ್ ಅಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ಬಳಕೆ ಹೇಗೆ?: ಮಹಿಳೆಯರು ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಟ್ಯಾಪ್ ಅಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ಪಡೆಯಬೇಕು. ಬಸ್‌ನಲ್ಲಿ ಪ್ರಯಾಣ ಮಾಡುವಾಗೆಲ್ಲ ಇದನ್ನು ಬಳಸಬೇಕು, ಬಸ್ ಒಳಗೆ ಹತ್ತುವಾಗ ಬಾಗಿಲಲ್ಲಿ ಸ್ಮಾರ್ಟ್ ಕಾರ್ಡ್‌ಅನ್ನು ಟ್ಯಾಪ್ ಮಾಡಿ ಹತ್ತಬೇಕು, ಹೊರಬರುವಾಗಲೂ ಟ್ಯಾಪ್ ಮಾಡಿ ಬರಬೇಕು.
ಈ ಸೌಲಭ್ಯದಿಂದ ಕಂಡಕ್ಟರ್‌ಗಳಿಗೆ ಮತ್ತು ಬಸ್ ಡ್ರೈವರ್‌ಗಳಿಗೆ ಹೆಚ್ಚು ಸಮಸ್ಯೆ ಆಗುವುದಿಲ್ಲ. ಯಾವ ಮಹಿಳೆ ಎಲ್ಲಿ ಬಸ್ ಹತ್ತಿ ಎಲ್ಲಿ ಇಳಿದರು ಎನ್ನುವ ಪೂರ್ತಿ ಮಾಹಿತಿ ಕೂಡ ಡಿಜಿಟಲ್ ಆಗಿ ರೆಕಾರ್ಡ್ ಆಗುತ್ತದೆ. ಹೊರ ರಾಜ್ಯದ ಮಹಿಳೆಯರಿಗೆ ಮಾತ್ರ ಟಿಕೆಟ್ ವಿತರಣೆ ಮಾಡಬೇಕಾಗುತ್ತದೆ. ಮೆಟ್ರೋ ಟ್ರೇನ್‌ಗಳಲ್ಲಿ ಈ ರೀತಿಯ ಸೇವೆಗಳು ಲಭ್ಯವಿದೆ. ಅದನ್ನೇ ಈಗ ಬಸ್‌ಗಳಲ್ಲೂ ತರಲು ಮುಂದಾಗಿದೆ ರಾಜ್ಯ ಸರ್ಕಾರ.
ಇದರಿಂದ ಈಗಾಗಲೇ ಆರ್ಥಿಕ ಇಲಾಖೆ ಮತ್ತು ಸಾರಿಗೆ ನಿಗಮಗಳ ನಡುವೆ ಇರುವ ಟಿಕೆಟ್ ಸಮಸ್ಯೆಗೂ ಮುಕ್ತಿ ನೀಡಿದಂತಾಗುತ್ತದೆ. ಇದರಿಂದ ಪಾರರ್ಶಕತೆಯನ್ನು ಕೂಡ ಕಾಪಾಡಿಕೊಳ್ಳಬಹುದಾಗಿದೆ. ಈ ಎಲ್ಲದಕ್ಕಿಂದ ಮುಖ್ಯವಾಗಿ ಕಂಡಕ್ರಟ್‌ಗಳಿಗೆ ದಂಡ ವಿಧಿಸುವುದು, ಅಮಾನತು ಮಾಡುವುದು ಕೂಡ ತಪ್ಪುದೆ. ಇದನ್ನು ಶೀಘ್ರವಾಗಿ ಜಾರಿಗೆ ತನ್ನಿ ಎನ್ನುತ್ತಿದ್ದಾರೆ ಚಾಲನಾ ಸಿಬ್ಬಂದಿಗಳು.