ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ತನ್ನ ಸಿಬ್ಬಂದಿಗಳಿಗೆ ಅಪಘಾತ ಪರಿಹಾರ ವಿಮೆ ಒದಗಿಸಲು ಯೂನಿಯನ್ ಬ್ಯಾಂಕ್ ಇಂಡಿಯಾದೊಂದಿಗೆ ಇಂದು ಒಡಂಬಡಿಕೆ ಮಾಡಿಕೊಂಡಿತು.
ಸೋಮವಾರ ಆ.21ರಂದು ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಪ್ರಧಾನ ವ್ಯವಸ್ಥಾಪಕ (DGM) ಆಸೀಮ್ ಕುಮಾರ್ ಪಾಲ್ ಅವರು ಒಡಂಬಡಿಕೆಗೆ ಸಹಿ ಹಾಕಿದರು.
ಈ ನಿಗಮವು ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ, ಮಿತವ್ಯಯ ಹಾಗೂ ಸುರಕ್ಷಿತ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಹಗಲಿರಳು ಶ್ರಮಿಸುತ್ತಿರುವ ಸಿಬ್ಬಂದಿಗಳಿಗಾಗಿ ಸಂಸ್ಥೆಯಿಂದ ಹಲವಾರು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿಯೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ Corporate Salary Package(CSP)ಯೋಜನೆಯಡಿ ಅಪಘಾತ ವಿಮಾ ಸೌಲಭ್ಯ ಕಲ್ಪಿಸಲಾಗಿದೆ.
ಸಂಸ್ಥೆಯ ಸಿಬ್ಬಂದಿ ಸೇವೆಯಲ್ಲಿರುವಾಗಲೇ ಅಪಘಾತದಿಂದಾಗಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅಂಗನ್ಯೂನ್ಯತೆಗೆ ಒಳಗಾದಲ್ಲಿ ಗಣನೀಯ ಮೊತ್ತದಷ್ಟು ಹಣ ದೊರೆಯುವಂತೆ ಮಾಡುವ ಉದ್ದೇಶದಿಂದ ನಿಗಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವೈಯಕ್ತಿಕ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತರುವ ಮೂಲಕ ನೌಕರರು ಹಾಗೂ ಅವರ ಅವಲಂಬಿತರಿಗೆ ಆರ್ಥಿಕ ಭದ್ರತೆ ಒದಗಿಸಲು ಯೋಜಿಸಿ ಈ ಕಾರ್ಯ ಕೈಗೊಳ್ಳಲಾಗಿದೆ.
ಈ ಬಗ್ಗೆ ವಿವಿಧ ಬ್ಯಾಂಕ್‌ಗಳನ್ನು ಸಂರ್ಪಕಿಸಲಾಗಿತ್ತು ಮತ್ತು ಬ್ಯಾಂಕ್‌ಗಳಲ್ಲಿ ವೇತನ ಖಾತೆಯನ್ನು ಹೊಂದಿರುವ ನೌಕರರಿಗೆ CSP ಯೋಜನೆಯಡಿ ವಿಮಾ ಸೌಲಭ್ಯವನ್ನು ನೀಡಲು ಸಿದ್ಧವಿರುವ ಬ್ಯಾಂಕ್‌ಗಳ ಮಾಹಿತಿ ಸಂಗ್ರಹ ಮಾಡಲಾಗಿತ್ತು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದವರು ಹೆಚ್ಚಿನ ವಿಮಾ ಪರಿಹಾರ ಹಾಗೂ ಇತರೇ ಸೌಲಭ್ಯಗಳನ್ನು ನೀಡಲು ಮುಂದೆ ಬಂದಿದ್ದು, ಈ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ.
ಹೀಗಾಗಿ ಬೆಂ.ಮ.ಸಾ.ಸಂಸ್ಥೆಯು ಕಾರ್ಪೊರೇಟ್ ಸಂಬಳದ ಪ್ಯಾಕೇಜ್‌ನ ಭಾಗವಾಗಿ ಅಪಘಾತ ಪರಿಹಾರ ವಿಮೆಯನ್ನು ಒದಗಿಸಲು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಒಡಂಬಡಿಕೆ ಮಾಡಿಕೊಂಡಿದ್ದು, ಈ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿರುವ ನೌಕರರಿಗೆ ಈ ಪ್ರಯೋಜನ ಸಿಗಲಿದೆ.
ಈ ಯೋಜನೆಯಗೆ ಅರ್ಹರಾಗಲು ಇರುವ ಮಾನದಂಡಗಳೇನು?: 1) ಬೆಂ.ಮ.ಸಾ.ಸಂಸ್ಥೆಯ ನೌಕರರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವೇತನ ಖಾತೆಯನ್ನು ಹೊಂದಿದ್ದು, ನಿಯಮಿತವಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮುಖಾಂತರ ಸಂಬಳವನ್ನು ಪಡೆಯುತ್ತಿರಬೇಕು.
2) ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ ವೇತನ ಖಾತೆಯನ್ನು ಹೊಂದಿರುವ ನೌಕರನು ಅವರ ವೇತನ ಶ್ರೇಣಿಗೆ ತಕ್ಕಂತೆ ಅಪಘಾತ ವಿಮೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. 3) ಈ ವಿಮಾ ಯೋಜನೆಯ ಮತ್ತೊಂದು ವಿಶಿಷ್ಟ ವೈಶಿಷ್ಟ್ಯವೆಂದರೆ, ನೌಕರನ ಅಪಘಾತ ಮರಣವು ಕರ್ತವ್ಯದಲ್ಲಿ ಅಥವಾ ಕರ್ತವ್ಯದಲ್ಲಿ ಇಲ್ಲದಿರುವ ವೇಳೆಗೂ ಸಹ ಅನ್ವಯಿಸುತ್ತದೆ.
4) ಅಪಘಾತದ ಸಂದರ್ಭದಲ್ಲಿ, ಉದ್ಯೋಗಿಗಳ ಶಾಶ್ವತ ಅಂಗವೈಕಲ್ಯತೆಯ ಶೇಕಡಾವಾರು ಪ್ರಮಾಣಕ್ಕೆ ಅನುಗುಣವಾಗಿ 40 ಲಕ್ಷ ರೂ.ಗಳವರೆಗೆ ಅಪಘಾತ ಪರಿಹಾರ ವಿಮೆಯನ್ನು ನೀಡಲಾಗುವುದು.
5) ವಿಮಾನ ಅಪಘಾತದ ಸಂದರ್ಭದಲ್ಲಿ, ಡೆಬಿಟ್ ಕಾರ್ಡ್ ಹೊಂದಿರುವ ಉದ್ಯೋಗಿಗಳು ಮರಣದ ಹೊಂದಿದ್ದಲ್ಲಿ, 1 ಕೋಟಿ ರೂ. ವರೆಗೆ ವಿಮೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಇದೇ ವೇಳೆ ಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ತಿಳಿಸಿದ್ದಾರೆ.
ಈ ವೇಳೆ ಬ್ಯಾಂಕ್ ಆಫ್ ಇಂಡಿಯಾದ ಎಜಿಎಂ ಜಿ.ಆರ್. ನಾಗಭೂಷಣ ಮತ್ತು ಬಿಎಂಟಿಸಿ ನಿಗಮದ ಅಧಿಕಾರಿಗಳು ಇದ್ದರು.