ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ 2023ರ ಜೂನ್ 11ರಿಂದ ಶಕ್ತಿ ಯೋಜನೆ ಜಾರಿ ಮಾಡಿದ್ದು, ಇದರಿಂದ ಖಾಸಗಿ ಸಾರಿಗೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಆರೋಪಿಸಿರುವ ಖಾಸಗಿ ಸಾರಿಗೆ ಸಂಘಟನೆಗಳು ಕರ್ನಾಟಕ ಬಂದ್ ಮಾಡುವ ಎಚ್ಚರಿಕೆ ನೀಡಿವೆ.
ಶಕ್ತಿ ಯೋಜನೆಯಿಂದ ಮಹಿಳೆಯರೇನೋ ಖುಷ್ ಆಗಿದ್ದಾರೆ. ಆದರೆ ಖಾಸಗಿ ಸಾರಿಗೆ ಸಂಘಟನೆಗಳು ಹಾಗೂ ಸರ್ಕಾರದ ಜಟಾಪಟಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸೋಮವಾರ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿದರು. ಆದರೆ, ಮುಖ್ಯಮಂತ್ರಿಗಳು ಕರೆದ ಸಭೆಯನ್ನು ಕೆಲ ಖಾಸಗಿ ಸಾರಿಗೆ ಸಂಘಟನೆಗಳು ಬಹಿಷ್ಕರಿಸಿವೆ. ಜತೆಗೆ ಸರ್ಕಾರಕ್ಕೆ ಮತ್ತೊಮ್ಮೆ ಬೆಂಗಳೂರು ಬಂದ್ ಅಥವಾ ಕರ್ನಾಟಕ ಬಂದ್ ಮಾಡುವ ಎಚ್ಚರಿಕೆ ನೀಡಿವೆ.
ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮಕ್ಕೆ ಎದುರಾದ ಸಂಕಷ್ಟಗಳ ಕುರಿತಂತೆ ಆಗಾಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಗಂಭೀರತೆ ಅರಿತ ಸಚಿವ ರಾಮಲಿಂಗಾರೆಡ್ಡಿ ಹಲವು ಸುತ್ತಿನ ಮಾತುಕತೆ ಸಹ ನಡೆಸಿದ್ದರು. ಆದರೆ ಯಾವುದಕ್ಕೂ ತಾರ್ಕಿಕ ಅಂತ್ಯ ಸಿಗದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಖಾಸಗಿ ಸಾರಿಗೆ ಒಕ್ಕೂಟದ ಸದಸ್ಯರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಆದರೂ ಫಲ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನು ಈ ಸಭೆಗೆ ಬಂದ್‌ಗೆ ಕರೆಕೊಟ್ಟಿದ್ದ ಖಾಸಗಿ ಸಾರಿಗೆ ಸಂಘಟನೆಗಳ ಅಧ್ಯಕ್ಷ ಹಾಗೂ ಖಾಸಗಿ ಬಸ್ ಸಂಘಟನೆಯ ಅಧ್ಯಕ್ಷ ನಟರಾಜ ಶರ್ಮಾ, ಪೀಸ್ ಆಟೋ ಅಸೋಸಿಯೇಷನ್‌ನ ರಾಘು, ರಾಧಾಕೃಷ್ಣ ಹೊಳ್ಳ ಸಂಘಟನೆಯವರು ಸಿಎಂ ಸಭೆಯನ್ನು ಬಹಿಷ್ಕರಿಸಿದ್ದರು.
ಈ ಬಗ್ಗೆ ಮಾತನಾಡಿದ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮಾ, ಸಾರಿಗೆ ಸಚಿವರ ಆಶ್ವಾಸನೆ ಮೇರೆಗೆ ಬಂದ್ ವಾಪಸ್ ಪಡೆದಿದ್ದೆವು. ಆದರೆ ಹೋರಾಟಕ್ಕೆ ಬೆಂಬಲ ಸೂಚಿಸದ ಸಂಘಟನೆಗಳನ್ನು ಸಭೆಗೆ ಕರೆಯಲಾಗಿದೆ. ಸಾರಿಗೆ ಅಡಿಷನಲ್ ಕಮೀಷನರ್ ಹೇಮಂತ್ ಕುಮಾರ್ ಸಂಘಗಳನ್ನು ಒಡೆಯೋ ಕೆಲಸ ಮಾಡುತ್ತಾರೆ.
ಹೇಮಂತ್ ಕುಮಾರ್ ವರ್ಗಾವಣೆಗೆ ಕಮಿಷನರ್‌ಗೆ ಮನವಿ ಮಾಡಿದ್ದೇವೆ. ಸಿಎಂ ಸಭೆಗೆ 32 ಸಂಘಟನೆಗಳು ಬಹಿಷ್ಕರಿಸಿದ್ದೇವೆ. ಸಿಎಂ ಸಭೆಯನ್ನು ತುಚ್ಚವಾಗಿ ನೋಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇನ್ನೂ 10 ದಿನ ಕಾಲಾವಕಾಶವಿದ್ದು ಅಷ್ಟರೊಳಗೆ ಮತ್ತೆ ಎಲ್ಲ ಸಂಘಟನೆಗಳು ಸೇರಿ ಸಭೆ ಕರೆಯಬೇಕು. ಇಲ್ಲದಿದ್ದರೆ ಹೋರಾಟದ ದಾರಿ ಹಿಡಿಯುತ್ತೇವೆ. ಸೆಪ್ಟೆಂಬರ್ 1 ರಂದು ಬೆಂಗಳೂರು ಅಥವಾ ಕರ್ನಾಟಕ ಬಂದ್ ದಿನಾಂಕ ಪ್ರಕಟಿಸುತ್ತೇವೆ ಎಂದರು.
ಸೋಮವಾರದ ಸಿಎಂ ಸಭೆಯಲ್ಲಿ ಭಾಗವಹಿಸಿದ ಆದರ್ಶ್ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಮಂಜುನಾಥ್ ಮಾತನಾಡಿ, ಆಟೋ ಅಸೋಸಿಯೇಷನ್‌ನ ಬೇಡಿಕೆಗೆ ಮನವಿ ಮಾಡಿದ್ದೇವೆ. 30 ರವರೆಗೆ ಗಡವು ನೀಡಲಾಗಿದೆ. ಬೇಡಿಕೆ ಈಡೇರದೇ ಇದ್ದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಒಟ್ಟಿನಲ್ಲಿ ಸಿಎಂ ಆಶ್ವಾಸನೆಗೆ ಕೆಲ ಒಕ್ಕೂಟಗಳು ಸಮ್ಮತ ವ್ಯಕ್ತಪಡಿಸಿದರೆ ಇನ್ನೂ ಕೆಲವು ಸಂಘಟನೆಗಳು ವಿರೋಧಿಸಿವೆ. ಯಾವಾಗ ಈ ಭರವಸೆಗಳು ಕಾರ್ಯರೂಪಕ್ಕೆ ಬರುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ. ಇಲ್ಲದಿದ್ದರೆ ಸಾರಿಗೆ ಒಕ್ಕೂಟಗಳು ಮತ್ತೆ ಹೋರಾಟದ ಹಾದಿ ತುಳಿಯುವುದು ಪಕ್ಕ. ಸಭೆಯಲ್ಲಿ ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.