ಬೆಂಗಳೂರು: ಇದೇ ಆಗಸ್ಟ್ 25ರಂದು ವರಮಹಾಲಕ್ಷ್ಮೀ ಹಬ್ಬವಿದ್ದು, ಈ ಹಬ್ಬಕ್ಕೆ ತಾವರೆ ಹೂವು ಕೀಳಲು ಹೋಗಿದ್ದ ತಂದೆ-ಮಗ ಇಬ್ಬರು ನೀರಿನಲ್ಲಿ ಮುಳಿಗೆ ದುರಂತ ಅಂತ್ಯಕಂಡಿರುವ ಘಟನೆ ಭೂಚನಹಳ್ಳಿಯಲ್ಲಿ ಜರುಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಭೂಚನಹಳ್ಳಿಯ ಕೆರೆಯಲ್ಲಿ ಈ ದುರ್ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಶಾಂತಿನಗರದ ನಿವಾಸಿಗಳಾದ ಪುಟ್ಟರಾಜು(42), ಮಗ ಕೇಶವ(14) ನೀರಿನಲ್ಲಿ ಮುಳುಗಿ ಅಸುನೀಗಿದವರು.
ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ತಂದು ಮಾರಾಟ ಮಾಡಲು ತಂದೆ ಮಗ ಪ್ಲಾನ್ ಮಾಡಿದ್ದರು. ಹೀಗಾಗಿ ಹೂ ತರಲು ಭೂಚನಹಳ್ಳಿ ಕೆರೆಗೆ ಹೋಗಿದ್ದಾರೆ. ಮೊದಲು ಹೂ ಕೀಳಲು ಪುತ್ರ ಕೇಶವ ಕೆರೆಗೆ ಇಳಿದಿದ್ದಾನೆ. ಆದ್ರೆ, ಏಕಾಏಕಿ ನೀರಿನಲ್ಲಿ ಮುಳುಗಿದ್ದಾನೆ. ಅದನ್ನು ಕಂಡ ಕೂಡಲೇ ತಂದೆ ಪುಟ್ಟರಾಜು ಸಹ ಪುತ್ರನನ್ನು ರಕ್ಷಿಸಲು ನೀರಿಗಿಳಿದಿದ್ದಾರೆ. ಆದ್ರೆ, ದುರದೃಷ್ಟವಶಾತ್ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಅವಘಡ ಸಂಭವಿಸಿದ ಸ್ವಲ್ಪ ಹೊತ್ತಿನ ನಂತರ ಮತ್ತೋರ್ವ ತಾವರೆ ಹೂ ಮಾರಾಟಗಾರ ಕೆರೆಯ ಬಳಿ ಹೋದಾಗ ದಡದಲ್ಲಿ ಮೊಬೈಲ್ ಮತ್ತು ಚಪ್ಪಲಿ ಪತ್ತೆಯಾಗಿವೆ. ಇದರಿಂದ ಅನುಮಾನಗೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ವಿಷಯ ತಿಳಿದ ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ತಂದೆ-ಮಗನ ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದಂದು ವರಮಹಾಲಕ್ಷ್ಮೀಗೆ ವಿಶೇಷ ಪೂಜೆ ನೆರವೆರಿಸಲು ಜನರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ವೇಳೆ ನಾವು ಒಂದಷ್ಟು ಕಾಸು ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡು ಹೋದ ಅಪ್ಪ ಮಗ ದರಂತ ಅಂತ್ಯಕಂಡಿರುವುದು ಮನಕಲುಕುವಂತಿದೆ.