ಶಿವಮೊಗ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೇಲಧಿಕಾರಿಗಳು ಭ್ರಷ್ಟಾಚಾರ ಮತ್ತು ಮಹಿಳಾ ಪೀಡಕರ ರಕ್ಷಣೆಗೆ ನಿಲ್ಲುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಈ ಮೂಲಕ ನಾವು ಅನ್ಯಾಯಕ್ಕೆ ಒಳಗಾದವರಿಗೆ ಎಂದಿಗೂ ನ್ಯಾಯಕೊಡಿಸಲು ಮುಂದಾಗುವುದಿಲ್ಲ ಎಂಬುದನ್ನೂ ಘಂಟಘೋಷವಾಗಿ ಹೇಳಿದಂತೆ ಕಾಣುತ್ತಿದೆ.
ಹೌದು! ಶಿವಮೊಗ್ಗ ವಿಭಾಗದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದ ವಿಭಾಗೀಯ ಸಂಚಾರ ಅಧಿಕಾರಿ ದಿನೇಶ್ ಕುಮಾರ್ ಚನ್ನಗಿರಿ ಅವರ ಭ್ರಷ್ಟಾಚಾರ ಹಾಗೂ ನಿರ್ವಾಹಕಿಯ ಲೈಂಗಿಕ ಕಿರುಕುಳಕದ ಬಗ್ಗೆ ವಿಜಯಪಥ ಸಮಗ್ರ ವರದಿ ಮಾಡಿತ್ತು. ಈ ಬಗ್ಗೆ ಎಚ್ಚೆತ್ತ ಮೇಲಧಿಕಾರಿಗಳು ದಿನೇಶ್ ಕುಮಾರ್ ಚನ್ನಗಿರಿ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು.
ಅದು ಕೂಡ ಆ.25-2023 ರಂದು ಚಿತ್ರದುರ್ಗ ವಿಭಾಗಕ್ಕೆ ವರ್ಗಾವಣೆ ಮಾಡಿದ್ದರು. ಆದರೆ, ಆ ಭ್ರಷ್ಟ ಅಧಿಕಾರಿ ಯಾರಿಂದ ಒತ್ತಡ ತಂದನೋ ಗೊತ್ತಿಲ್ಲ. ವರ್ಗಾವಣೆಗೊಂಡು 24 ಗಂಟೆ ಕಳಿಯುವಷ್ಟರಲ್ಲೇ ಮತ್ತೆ ಆ ವರ್ಗಾವಣೆಯನ್ನು ರದ್ದುಪಡಿಸಿಕೊಂಡು ಅದೇ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾನೆ.
ಆ.26-2023 ರಂದು ಅಂದರೆ ಶನಿವಾರ ಶಿವಮೊಗ್ಗ ವಿಭಾಗಕ್ಕೆ ಮತ್ತೆ ವರ್ಗಾವಣೆ ಮಾಡಿಸಿ ಕೊಂಡು ಬಂದಿದ್ದಾನೆ. ಅಧಿಕಾರಿಗಳ ವರ್ಗಾವಣೆ ಮಾತ್ರ ಒಂದೇ ಒಂದು ದಿನದಲ್ಲಿ ಆಗುತ್ತದೆ ಮತ್ತೆ ಅಷ್ಟೇ ವೇಗದಲ್ಲಿ ರದ್ದಾಗುತ್ತದೆ ಎಂದರೆ ಎಲ್ಲಿದೆ ಪಾರದರ್ಶಕತೆ, ಎಲ್ಲಿದೆ ಪ್ರಾಮಾಣಿಕತೆ, ಪ್ರಬುದ್ಧತೆ ಎಂದು ಸಂಸ್ಥೆಯ ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಸಂಸ್ಥೆ ಸಿಬ್ಬಂದಿಗಳು ಈ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದು, ಈ ವರ್ಗಾವಣೆ ರದ್ದು ಪಡಿಸಿರುವುದರ ಹಿಂದೆ ಎಷ್ಟು ಕಾಂಚಾಣ ನರ್ತನ ಮಾಡಿದೆಯೋ ಗೊತ್ತಿಲ್ಲ. ನಿಗಮದ ವ್ಯವಸ್ಥಾಪಕ ನಿರ್ದೇಶಕರು ಬಹಳ ಪ್ರಾಮಾಣಿಕರು ನಿಷ್ಠಾವಂತರು ಎಂದು ನೌಕರರು ಭಾವಿಸಿದ್ದಾರೆ. ಆದರೆ, ಅವರು ಕೂಡ ಕೆಲವರ ಕೈಗೊಂಬೆ ಎಂಬುವುದು ಈಗ ತಿಳಿದಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಓರ್ವ ನೌಕರನ ವರ್ಗಾವಣೆ ಮಾಡಿದರೆ ಮೂರು ವರ್ಷಗಳ ಕಾಲ ಬದಲಾವಣೆ ಇಲ್ಲ ಎಂದು ತಿಳಿಸುತ್ತಾರೆ. ಆದರೆ ಈ ಭ್ರಷ್ಟ ಅಧಿಕಾರಿಗಳ ವರ್ಗಾವಣೆಗೆ ಸಂಸ್ಥೆಯಲ್ಲಿ ನಿಬಂಧನೆಗಳು ಇದ್ದರೂ ಯಾವುದೇ ನಿಬಂಧನೆಗಳು ಇಲ್ಲದಂತಾಗಿದೆ. ಇದು ಸಿಬ್ಬಂದಿಗಳಿಗೆ ಒಂದು ನ್ಯಾಯ ಅಧಿಕಾರಿಗಳಿಗೆ ಒಂದು ನ್ಯಾಯ ಎಂಬಂತಾಗಿದೆ.
ಸ್ವಾಮಿ ವ್ಯವಸ್ಥಾಪಕ ನಿರ್ದೇಶಕರೆ ಈ ಭ್ರಷ್ಟ ಅಧಿಕಾರಿ ನಿರ್ವಾಹಕಿಗೆ ಲೈಂಗಿಕ ಕಿರುಕುಳ ನೀಡಿದ್ದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಬಂದಿದ್ದರೆ ತಾವು ಕೂಲಂಕಷವಾಗಿ ಇತ್ತ ಗಮನ ಹರಿಸಿ ಸೂಕ್ತ ಶಿಸ್ತು ಕಠಿಣ ಕ್ರಮ ಕೈಗೊಳ್ಳಬೇಕಿತ್ತಲ್ಲವೇ ಎಂದು ನೌಕರರು ಪ್ರಶ್ನಿಸುತ್ತಿದ್ದಾರೆ.
ಇನ್ನು ರಜಾದಿನಗಳು ಇದ್ದರೂ ಸಹ ಈ ರೀತಿಯ ವರ್ಗಾವಣೆಗಳನ್ನು ರದ್ದು ಮಾಡುವುದಕ್ಕೆ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ/ ಸಿಬ್ಬಂದಿಗಳ ಕೊರತೆ ಇರುವುದಿಲ್ಲವೇ? ಆದರೆ ಒಬ್ಬ ಸಿಬ್ಬಂದಿಗೆ ಏನಾದರೂ ಕೆಲಸ ಆಗಬೇಕು ಎಂದು ಕಚೇರಿಗೆ ಭೇಟಿ ನೀಡಿದರೆ ಇವತ್ತು ಅಧಿಕಾರಿಗಳು ರಜೆ ಇದ್ದಾರೆ ಇನ್ನೂ ಮೂರು ದಿನ ಬಿಟ್ಟು ಬನ್ನಿ ಎಂದು ಹೇಳಿ ಕಳುಹಿಸುತ್ತಾರೆ ಎಲ್ಲಿದೆ ನ್ಯಾಯ, ಪ್ರಾಮಾಣಿಕತೆ ಪ್ರಬುದ್ಧತೆ ಪಾರದರ್ಶಕತೆ ಸ್ವಾಮಿ ಎಂದು ವ್ಯವಸ್ಥಾಪಕ ನಿರ್ದೇಶಕರನ್ನು ನೌಕರರು ಕೇಳುತ್ತಿದ್ದಾರೆ.
ಒಟ್ಟಾರೆ ಸಾರಿಗೆ ನಿಗಮಗಳಲ್ಲಿ ಒಬ್ಬ ಹೆಣ್ಣು ಮಗಳಿಗೆ ರಕ್ಷಣೆ ನೀಡದಷ್ಟು ಇಲ್ಲಿನ ಅಧಿಕಾರಿಗಳು ಭಂಡತನ ಮೆರೆಯುತ್ತಿದ್ದಾರೆ ಎಂದರೆ ಇದಕ್ಕೆ ಯಾರನ್ನು ಹೊಣೆ ಮಾಡಬೇಕು. ಈ ಬಗ್ಗೆ ಸಾರಿಗೆ ಸಚಿವರು ಸೂಕ್ತ ಕ್ರಮ ಜರುಗಿಸಿ ನೊಂದ ಮಹಿಳಾ ಸಿಬ್ಬಂದಿಗೆ ನ್ಯಾಯ ಒದಗಿಸಿಕೊಡಬೇಕು. ಜತೆಗೆ ಈ ಭ್ರಷ್ಟ ಅಧಿಕಾರಿಯನ್ನು ವಿಚಾರಣೆ ಮುಗಿಯುವವರೆಗೂ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿ KSRTC ಲಂಚಕೋರ, ಹೆಣ್ಣುಬಾಕ ಅಧಿಕಾರಿ ದಿನೇಶ್ ಚನ್ನಗಿರಿ: ಶಿಕ್ಷಿಸಬೇಕಾದ ಮೇಲಧಿಕಾರಿಗಳೇ ರಕ್ಷಣೆಗೆ ನಿಂತರೆ..!?