ಬಳ್ಳಾರಿ: ವಿದ್ಯುತ್ ಕಂಬದ ಮೇಲತ್ತಿ ತಂತಿ ಸರಿಪಡಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ವ್ಯಕ್ತಿಯ ರುಂಡ ಮುಂಡ ಕ್ಷಣಾರ್ಧದಲ್ಲಿ ಬೇರಾದ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.
ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ನಿವಾಸಿ ಬದ್ರಿ ಎಂಬವರೇ ದಾರುಣವಾಗಿ ಪ್ರಾಣ ಕಳೆದುಕೊಂಡ ದುರ್ದೈವಿ. ವಿದ್ಯುತ್ ಕಂಬವೇರಿದ ವ್ಯಕ್ತಿಯೊಬ್ಬರು ಅಲ್ಲೇ ವಿದ್ಯುತ್ ಆಘಾತಕ್ಕೆ ಒಳಗಾಗಿ ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಈ ಆಘಾತ ಎಷ್ಟು ಬಲವಾಗಿತ್ತು ಎಂದರೆ ಅವರ ದೇಹದ ರುಂಡ ಮುಂಡಗಳೇ ಬೇರ್ಪಟ್ಟಿವೆ. ಮುಂಡ ಮೇಲೆ ತಂತಿಯಲ್ಲಿ ನೇತಾಡುತ್ತಿದ್ದರೆ, ರುಂಡ ಕೆಳಗೆ ಜಮೀನಿನಲ್ಲಿ ಬಿದ್ದಿದೆ.
ಬದ್ರಿ ಅವರು ಗುರುವಾರ ಆ.31 ಬೆಳಗ್ಗೆ 6 ಗಂಟೆ ಹೊತ್ತಿಗೆ ಹೊಲಕ್ಕೆ ಹೋಗಿದ್ದರು. ಆಗ ವಿದ್ಯುತ್ ಇರಲಿಲ್ಲ ಎಂದು ತಾನೇ ವಿದ್ಯುತ್ ಕಂಬ ಹತ್ತಿ ಸರಿ ಮಾಡಲು ತೆರಳಿದ್ದರು. ವಿದ್ಯುತ್ ತಂತಿ ಬೇರ್ಪಟ್ಟಿದ್ದರಿಂದ ಸಮಸ್ಯೆಯಾಗಿದೆ ಎನ್ನುವುದು ಅವರಿಗೆ ಗೊತ್ತಾಗಿತ್ತು. ಇನ್ನು ಲೈನ್ ಮ್ಯಾನ್‌ಗಳಿಗೆ ಹೇಳಿದರೆ ತಕ್ಷಣ ಬರಲಿಕ್ಕಿಲ್ಲ ಅಂದುಕೊಂಡು ಅವರು ತಾನೇ ಸರಿ ಮಾಡಲು ಹೋಗಿದ್ದರು.
ವಿದ್ಯುತ್ ಕಂಬವನ್ನು ಹತ್ತಿ ವಿದ್ಯುತ್ ತಂತಿ ಸರಿಪಡಿಸುವ ವೇಳೆ ವಿದ್ಯುತ್ ಪ್ರವಹಿಸಿದೆ. ಅಂತೂ ಅವರು ಜೋಡಿಸುತ್ತಿದ್ದಂತೆಯೇ ವಿದ್ಯುತ್ ಪ್ರವಹಿಸಿ ಅಲ್ಲೇ ಶಾಕ್ ಹೊಡೆದಿದೆ. ವಿದ್ಯುತ್ ಶಾಕ್‌ನ ಆಘಾತಕ್ಕೆ ಅವರ ಒಮ್ಮಿಂದೊಮ್ಮೆಗೇ ಅವರು ತಮ್ಮ ಮೈಯನ್ನು ಎಳೆದುಕೊಂಡ ವೇಗ ಎಷ್ಟಿತ್ತೆಂದರೆ ಅವರ ಕುತ್ತಿಗೆ ತಂತಿಗೆ ಸಿಲುಕಿ ಕತ್ತರಿಸಲ್ಪಟ್ಟು ಕೆಳಗೆ ಬಿದ್ದಿದೆ. ಮುಂಡ ಭಾಗ ತಂತಿ ಮೇಲೆ ನೇತಾಡಿಕೊಂಡಿದೆ.
ಮೃತ ವ್ಯಕ್ತಿ ಏಕಾಏಕಿ ತಾನೇ ಕಂಬ ಏರಿ ಲೈನ್ ಬದಲಾವಣೆ ಮಾಡಲು ಹೋಗಿದ್ದೇ ತಪ್ಪಾಗಿದೆ. ಒಂದೊಮ್ಮೆ ಈ ಕಂಬಕ್ಕೆ ಬರುವ ವಿದ್ಯುತ್ ಪ್ರವಾಹವನ್ನು ನಿಲ್ಲಿಸಿ ಈ ಕೆಲಸ ಮಾಡಿದ್ದರೆ ಪ್ರಾಣಾಪಾಯ ಆಗುತ್ತಿರಲಿಲ್ಲ ಎನ್ನಲಾಗಿದೆ. ಆದರೆ, ದುಡುಕಿದ ಬದ್ರಿ ಈಗ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ದುಸ್ಸಾಹಸ ಬೇಡ: ವಿದ್ಯುತ್, ಬೆಂಕಿ, ನೀರು ಮೊದಲಾದ ಸಂಗತಿಗಳಲ್ಲಿ ಯಾರೂ ದುಸ್ಸಾಹಸ ಮಾಡಲು ಹೋಗಲೇಬಾರದು. ವಿದ್ಯುತ್ ಸಮಸ್ಯೆಯಾದ ಸಂದರ್ಭದಲ್ಲಿ ಸಮೀಪದ ಲೈನ್ ಮ್ಯಾನ್ ಇಲ್ಲವೇ ಇತರ ಸಿಬ್ಬಂದಿಯ ಗಮನಕ್ಕೆ ತಂದು ರಿಪೇರಿ ಮಾಡಿಸುವುದನ್ನು ಬಿಟ್ಟು ತಾವೇ ರಿಪೇರಿಗೆ ಇಳಿದರೆ ಯಾವಾಗ ಏನು ಬೇಕಾದರೂ ಆಗಬಹುದು.