ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಿಂದೂಗಳ ಆರಾಧ್ಯ ದೈವ ಶಿವಲಿಂಗವನ್ನು ದೆಹಲಿಯ ಬೀದಿಗಳಲ್ಲಿಟ್ಟು ಕಾರಂಜಿಯ ರೂಪದಲ್ಲಿ ಅಲಂಕರಿಸುವ ಮೂಲಕ ಕೋಟ್ಯಂತರ ಭಾರತೀಯರಿಗೆ ಅವಮಾನ ಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕುಶಾಲ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದದ್ದಾರೆ.
ನಗರದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲು ಮಾತನಾಡಿದ ಅವರು, ‘ಬಿಜೆಪಿಯವರು ಧರ್ಮವನ್ನು ದುರ್ಬಳಕೆ ಮಾಡಿಕೊಂಡು, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ, ದ್ವೇಷವನ್ನು ಬಿತ್ತಿ ಅದನ್ನೇ ಉಸಿರಾಡಿದ್ದಾರೆ. ಕೋಟ್ಯಂತರ ಭಾರತೀಯರು ಪೂಜಿಸುವ ಶಿವಲಿಂಗವನ್ನು ಅವಮಾನಿಸುತ್ತಿದೆ ಎಂದು ಹೇಳಿದರು.
ದೆಹಲಿಯ ಧೌಲಾ ಕೌನ್ನಲ್ಲಿ ಜಿ-20 ಶೃಂಗಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಿವಲಿಂಗದ ಆಕಾರದ ಕಾರಂಜಿಗಳನ್ನು ಅಳವಡಿಸಲಾಗಿದೆ. ಇದು ಶಿವಲಿಂಗವನ್ನು ಪೂಜಿಸುವ ವೀರಶೈವ ಲಿಂಗಾಯತ ಸಮುದಾಯಕ್ಕೆ ಮತ್ತು ಶಿವಲಿಂಗವನ್ನು ಪೂಜಿಸುವ ಎಲ್ಲ ಹಿಂದೂಗಳಿಗೆ ತೋರಿದ ಅಗೌರವವಾಗಿದೆ. ಸದಾ ಹಿಂದೂ ಪರ ಎಂದು ಬಿಂಬಿಸಿಕೊಳ್ಳುವ ನರೇಂದ್ರ ಮೋದಿ ಶಿವಲಿಂಗಕ್ಕೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ನಾಯಕರು ನಾಚಿಕೆಯಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅವಮಾನಕರ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ, ಇದು ಖಂಡನೀಯ, ಹಿಂದೂಗಳ ಪವಿತ್ರ ಚಿಹ್ನೆಯಾದ ಶಿವಲಿಂಗವನ್ನು ಅವಮಾನಿಸುವುದನ್ನು ಯಾವುದೇ ಸಂದರ್ಭದಲ್ಲೂ ಸಹಿಸುವುದಿಲ್ಲ, ಕೇಂದ್ರ ಸರ್ಕಾರ ಕೂಡಲೇ ತನ್ನ ತಪ್ಪನ್ನು ಸರಿಪಡಿಸಿ ಅಲಂಕಾರಿಕ ಕಾರಂಜಿಗಳನ್ನು ತೆರವುಗೊಳಿಸಬೇಕು. ಜತೆಗೆ ಎಲ್ಲ ಭಾರತೀಯರಲ್ಲಿ ಕ್ಷಮೆಯಾಚಿಸಬೇಕು. ಅಲ್ಲದೆ ಮುಖ್ಯವಾಗಿ, ಅದನ್ನು ಸೂಕ್ತ ಸ್ಥಳಗಳಲ್ಲಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಇನ್ನು ಚಂದ್ರಯಾನ-3ರ ಯಶಸ್ಸಿನ ನಂತರ, ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಶಿವ ಶಕ್ತಿ ಎಂದು ಹೆಸರಿಸಲಾಯಿತು ಮತ್ತು ಬಿಜೆಪಿ ತನ್ನನ್ನು ಹಿಂದೂ ಪರ ಎಂದು ಬಿಂಬಿಸಿತು. ಆದರೆ ಅದೇ ಶಿವನನ್ನು ದೆಹಲಿಯ ಬೀದಿಗಳಲ್ಲಿ ಅಲಂಕಾರಿಕ ವಸ್ತುವಾಗಿ ಪ್ರತಿಷ್ಠಾಪಿಸಿ ತಮ್ಮ ನೈಜ ಮನಸ್ಥಿತಿಯನ್ನು ತೋರಿಸಿದ್ದಾರೆ. ವಾಸ್ತವದಲ್ಲಿ ಬಿಜೆಪಿ ಹಿಂದೂ ವಿರೋಧಿಯಾಗಿದೆ. ಹಿಂದುತ್ವ ಮತ್ತು ಹಿಂದೂ ದೇವರನ್ನು ಮತ ಪಡೆಯಲು ಬಳಸುತ್ತಾರೆ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಟೀಕಿಸಿದರು.
ಶಿವಲಿಂಗವು ಪ್ರತಿಯೊಬ್ಬ ಭಕ್ತನಿಗೂ ಆಧ್ಯಾತ್ಮಿಕ ಮತ್ತು ದೈವಿಕವಾಗಿದೆಯೇ ಹೊರತು ವಸ್ತುವಲ್ಲ ಎಂದು ಅವರು, ಇದೇರೀತಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಭಾರತೀಯರು ಕಲ್ಲುಗಳನ್ನು ಪೂಜಿಸುತ್ತಾರೆ ಎಂದು ಕಟುವಾದ ಪದಗಳನ್ನು ಬಳಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಮಾಧ್ಯಮ ಸಂಚಾಲಕ ಅನಿಲ್ ನಾಚಪ್ಪ ಉಪಸ್ಥಿತರಿದ್ದರು.