ಬೆಂಗಳೂರು : ನಿವೃತ್ತಿಯ ನಂತರ ಆರ್ಥಿಕವಾಗಿ ಸದೃಢ ಬದುಕು ಸಾಗಿಸುವಂತೆ ಮಾಡಲು ಮತ್ತು ನಿವೃತ್ತಿಯ ನಂತರವೂ ಆದಾಯಕ್ಕೆ ತಡೆಯಾಗದಂತೆ ನೋಡಿಕೊಳ್ಳಲು ಪಾವತಿಸುವ ಮೊತ್ತವೇ ಪಿಂಚಣಿ. ಅದನ್ನು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಒದಗಿಸುತ್ತವೆ. ಇದಕ್ಕಾಗಿ ಸರ್ಕಾರ ನಾನಾ ರೀತಿಯ ಪಿಂಚಣಿ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ.
ಇಂದು ಮಾರುಕಟ್ಟೆಯಲ್ಲಿ ಅನೇಕ ಪಿಂಚಣಿ ಯೋಜನೆಗಳನ್ನು ನಾವು ಕಾಣಬಹುದಾಗಿದೆ. ಆದರೆ ಈ ಪೈಕಿ ಕೆಲವು ಉತ್ತಮ ಯೋಜನೆಗಳು ಸರ್ಕಾರದ ವತಿಯಿಂದ ನಡೆಸಲ್ಪಡುತ್ತಿವೆ. ಅದರಲ್ಲಿ ಹೂಡಿಕೆ ಮಾಡುವುದರಿಂದ ದೊಡ್ಡ ಮಟ್ಟದ ಲಾಭವಾಗುವುದು.
ರಾಷ್ಟ್ರೀಯ ಪಿಂಚಣಿ ಯೋಜನೆಯೊಂದಿಗೆ, ನಾಗರಿಕರ ಭವಿಷ್ಯವನ್ನು ಸುರಕ್ಷಿತಗೊಳಿಸಲು ಇತರ ಯೋಜನೆಗಳು ಸಹ ಬಹಳ ಜನಪ್ರಿಯವಾಗಿವೆ. ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಪಿಂಚಣಿ ಮಾತ್ರವಲ್ಲದೆ ಪ್ರಯಾಣ, ಆರೋಗ್ಯ ರಕ್ಷಣೆ ಮತ್ತು ಇತರ ನಿವೃತ್ತಿ ಪ್ರಯೋಜನಗಳನ್ನು ಒದಗಿಸಲಿದೆ.
ಅಟಲ್ ಪಿಂಚಣಿ ಯೋಜನೆ : ಖಾಸಗಿ ವಲಯದಲ್ಲಿ ಕೆಲಸ ಮಾಡುವ ನೌಕರರು, ಬಡವರನ್ನು ಪರಿಗಣಿಸಿ ಅಟಲ್ ಪಿಂಚಣಿ ಯೋಜನೆ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಮಾಸಿಕ ಪಿಂಚಣಿ ನೀಡಲಾಗುತ್ತದೆ. 18 ರಿಂದ 40 ವರ್ಷ ವಯಸ್ಸಿನ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿ ಪ್ರತಿ ತಿಂಗಳು 1000 ರೂಪಾಯಿಯಿಂದ 5000 ರೂ.ವರೆಗೆ ಪಿಂಚಣಿ ಪಡೆಯಬಹುದು. ತೆರಿಗೆ ಪಾವತಿದಾರರು ಈ ಯೋಜನೆಯಲ್ಲಿ ಭಾಗವಹಿಸುವಂತಿಲ್ಲ.
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ : ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆಯನ್ನು (IGNOAPS) ಕೇಂದ್ರ ಸರ್ಕಾರವು ವೃದ್ಧರಿಗಾಗಿ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ವೃದ್ಧಾಪ್ಯದಲ್ಲಿ ಮಾಸಿಕ ಪಿಂಚಣಿ ಪಡೆಯಬಹುದು. ಇದರ ಪ್ರಕಾರ, 60 ವರ್ಷದಿಂದ 79 ವರ್ಷದೊಳಗಿನ ಪಿಪಿಎಲ್ ವರ್ಗಕ್ಕೆ ಸೇರಿದ ಹಿರಿಯ ನಾಗರಿಕರಿಗೆ ತಿಂಗಳಿಗೆ 300 ರೂ. ಪಿಂಚಣಿ ನೀಡಲಾಗುತ್ತದೆ. 80 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವರಿಗೆ 500 ರೂ. ಪಿಂಚಣಿ ನೀಡಲಾಗುತ್ತದೆ.
ಎಲ್ಐಸಿ ಪಿಂಚಣಿ ಯೋಜನೆ : ವರ್ಷಾಶನ ಖಾತರಿ ಪಿಂಚಣಿ ಯೋಜನೆಯನ್ನು ಎಲ್ಐಸಿ ನೀಡುತ್ತಿದೆ. ಇದರಲ್ಲಿ ಒಂದು ದೊಡ್ಡ ಮೊತ್ತವನ್ನು ಪಾವತಿಸಿದ ನಂತರ ಖಾತರಿ ಪಿಂಚಣಿಯನ್ನು ಪಡೆಯಬಹುದು. ಇದರಲ್ಲಿ ಹೂಡಿಕೆ ಮಾಡಿದ 15 ವರ್ಷಗಳ ನಂತರ ಮೊತ್ತವನ್ನು ಹಿಂಪಡೆಯಬಹುದು.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ : ಕೇಂದ್ರ ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ನಡೆಸುತ್ತದೆ. ಇದರಲ್ಲಿ ಮೊದಲು ನಾವು ಹೂಡಿಕೆ ಮಾಡಬೇಕಾಗುತ್ತದೆ. ಅದರಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ನಿಯಂತ್ರಿತ ಮಾರುಕಟ್ಟೆ ಆಧಾರಿತ ಮತ್ತು ಸುರಕ್ಷಿತ ಆದಾಯವನ್ನು ನೀಡಲಾಗುತ್ತದೆ.
ಇನ್ನು ಇದನ್ನು PFRDA ಯಂತೆಯೇ ನಿರ್ವಹಿಸಲಾಗುತ್ತದೆ. ಯಾವುದೇ ಭಾರತೀಯ ಪ್ರಜೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅದರಲ್ಲಿ ಹೂಡಿಕೆ ಮಾಡುವ ಮೂಲಕ ವೃದ್ಧಾಪ್ಯವನ್ನು ಸುರಕ್ಷಿತವಾಗಿ ಇಡಬಹುದು. ಇದು ನಿಮ್ಮ ವೃದ್ಧಾಪ್ಯದಲ್ಲಿ ಆದಾಯದ ಪ್ರಮುಖ ಮೂಲವಾಗಲೂ ಬಹುದು. ಹೀಗೆ ಪಿಂಚಣಿ ಸೌಲಭ್ಯವು ವೃದ್ಧಾಪ್ಯದಲ್ಲಿ ನಮಗೆ ಬೇಕು ಎಂದು ಬಯಸುವವರು ಈಗಲೇ ಇದಕ್ಕೆ ಇಂತಿಷ್ಟು ಹಣ ಎಂದು ಹೂಡಿಕೆ ಮಾಡಬಹುದು.