ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಲ್ಲಿ ಕರ್ನಾಟಕಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದು ಪಕ್ಕಾ ಆಗಿದ್ದು, ಈ ಮೈತ್ರಿ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಚಿತಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ಅವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಂತೋಷದ ವಿಚಾರ, ಜೆಡಿಎಸ್‌ಗೆ ನಾಲ್ಕು ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಡಲು ಕೇಂದ್ರ ಗೃಹಸಚಿವ ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಮೈತ್ರಿಯಿಂದ ನಮಗೆ ಶಕ್ತಿ ಬಂದಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿರೋ ಯಡಿಯೂರಪ್ಪ ಇಂದು ಬಿಜೆಪಿ, ಜೆಡಿಎಸ್ ಮೈತ್ರಿಯನ್ನು ಖಚಿತಪಡಿಸಿದ್ದಾರೆ. ಇದರ ಜತೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ 4 ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆ ಸಹಮತವಿದೆ ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭೇಟಿ ಮಾಡಿದ್ದಾರೆ. ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಅವರ ಕೋರ್ಟ್ ಕೇಸ್‌ಗೆ ಸಂಬಂಧಿಸಿದಂತೆ ವಕೀಲರ ಭೇಟಿಗೆ ತೆರಳಿದ್ದ ದೇವೇಗೌಡರು, ಇದೇ ವೇಳೆ ರಹಸ್ಯವಾಗಿ ಅಮಿತ್ ಶಾ ಜತೆ ಚರ್ಚೆ ನಡೆಸಿದ್ದಾರೆ.
ಈ ವೇಳೆ ಉಭಯ ನಾಯಕರ ನಡುವೆ ಮೈತ್ರಿ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಇಂದು ಬಿಎಸ್‌ವೈ ಅವರು ಕೂಡ ಮೈತ್ರಿ ಖಚಿತ ಎಂದು ತಿಳಿಸಿದ್ದಾರೆ.
ಏನು ಚರ್ಚೆ ನಡೆದಿದೆ?: ಹಾಸನ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್‍ಗೆ ಹೆಚ್ಚು ಶಕ್ತಿಯಿದೆ. ಈ ಭಾಗದಲ್ಲಿ ಬಿಜೆಪಿ ಕೈ ಜೋಡಿಸಬೇಕು. ಉಳಿದ ಕಡೆ ನಿಮಗೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ. ದೇವೇಗೌಡರ ಬೇಡಿಕೆಗೆ ಒಪ್ಪಿಗೆ ಸಿಕ್ಕಿದರೆ ಸೆ.10ರ ಸಮಾವೇಶದ ಬಳಿಕ ಜೆಡಿಎಸ್ ನಿರ್ಧಾರ ಪ್ರಕಟವಾಗಲಿದೆ.