ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಹಿನ್ನೆಲೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಹಿತಿ ಹಂಚಿಕೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ‘ಮಾಡಿಕೊಳ್ಳಲಿ ಬಿಡ್ರಿ, ನಮಗೇನು ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು. ಯಾರು ಮೈತ್ರಿ ಮಾಡಿಕೊಳ್ಳುತ್ತಾರೊ, ಪ್ರತ್ಯೇಕವಾಗಿ ಸ್ಪರ್ಧಿಸುತ್ತಾರೊ ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ. ನಾವು ಜನರ ಹತ್ತಿರ ಮತ ಕೇಳ್ತೀವಿ. ಜನರು ನಮ್ಮ ಪರವಾಗಿದ್ದಾರೆ. ನಮಗೆ ಮತ ಹಾಕ್ತಾರೆ’ ಎಂದು ಹೇಳಿದರು.
ಬಿಜೆಪಿ- ಜೆಡಿಎಸ್ಗೆ ಒಳ್ಳೆಯದಾಗಲಿ: ಇನ್ನು ಈ ಬಗ್ಗೆ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಒಳ್ಳೆಯದಾಗಲಿ, ಚೆನ್ನಾಗಿರಲಿ. ಸಿದ್ಧಾಂತ ಹೇಗೆ ವರ್ಕೌಟ್ ಆಗುತ್ತೆ ನೋಡಬೇಕು. ನಮ್ಮ ಅಭ್ಯಂತರ ಇಲ್ಲ, ಇದು ಹೊಸದೇನೂ ಅಲ್ಲ ಎಂದರು.
ಇತ್ತ ರಾಜ್ಯದಲ್ಲಿ ಲೋಕಸಭಾ ಉನಾವಣೆ ಕಾವು ಹೆಚ್ಚಾಗುತ್ತಿದೆ. ಕೇಂದ್ರದಿಂದ ಹಲವು ನಾಯಕರು ಕರ್ನಾಟಕದತ್ತ ಮುಖ ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗುವುಕ್ಕಾಗಿ ಬೃಹತ್ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ.
ಇನ್ನು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕೂಡ ರಾಜ್ಯಕ್ಕೆ ಆಗಮಿಸಿ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಭೇಟಿಮಾಡಿ ಜೆಡಿಎಸ್ ಪಕ್ಷದ ಮುಂದಾಲೋಚನೆಯ ಬಗ್ಗೆ ಮಾತನಾಡಿದು, ಜೆ.ಪಿ. ನಡ್ಡಾ ಕೂಡ ಇವರನ್ನು ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈಗಾಗಲೇ ಯಡಿಯೂರಪ್ಪ ಹೇಳಿಕೆಯಂತೆ ಭಾರತೀಯ ಜನತಾ ಪಕ್ಷ 24 ಕ್ಷೇತ್ರದಲ್ಲಿ ತಮ್ಮ ಪಾರುಪತ್ಯ ಸಾಧಿಸಲು ಮುಂದಾದರೆ, ಜೆಡಿಎಸ್ 4 ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಲಿದೆ. ಅತ್ತ ಕಾಂಗ್ರೆಸ್ ಮಾತ್ರ ಇನ್ನೂ ಆಪರೇಷನ್ ನಡೆಸುತ್ತಲೇ ಇದೆ.