ರಾಯಚೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗದ ಮಸ್ಕಿ ಘಟಕದ ಬಸ್ (KA 36 F1628) ಬೆಂಗಳೂರಿನಿಂದ ಮಸ್ಕಿ ಕಡೆಗೆ ಬರುವಾಗ ಸೋಮವಾರ ಬೆಳಗಿನ ಜಾವ 5.30 ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಲಾರಿಗೆ ಡಿಕ್ಕೆ ಹೊಡೆದ ಪರಿಣಾಮ ಮಗು ಸೇರಿದಂತೆ ಐವರು ಮೃತಪಟ್ಟಿದ್ದಾರೆ.
ಅಲ್ಲದೆ ಬಸ್‌ನಲ್ಲಿದ್ದ ಒಟ್ಟು 51 ಜನರಲ್ಲಿ ಬಹುತೇಕ ಎಲ್ಲರೂ ಗಾಯಗೊಂಡಿದ್ದು, ಇನ್ನೂ 6-8 ಮಂದಿಯ ಸ್ಥಿತಿ ಗಂಭೀರವಾಗಿದೆ. ಇನ್ನು ಈ ಅಪಘಾತಕ್ಕೆ ಕಾರಣ ಏನು ಅಂತ ಕೇಳಿದರೆ ಮಸ್ಕಿ ಘಟಕದ ಕೆಲ ಸಿಬ್ಬಂದಿ ಹೇಳುತ್ತಿರುವುದು, ನಾವು ಡ್ರೈವರ್ ಕಂ ಕಂಡಕ್ಟರ್ ಎರಡೂ ಕೆಲಸವನ್ನು ಮಾಡಬೇಕಾಗಿದೆ.
ಇತ್ತ ಟಿಕೆಟ್‌ಗಳನ್ನು ಪ್ರಯಾಣಿಕರಿಗೆ ವಿತರಿಸಬೇಕು. ಬಳಿಕ ಬಸ್‌ಅನ್ನು ಕೂಡ ಓಡಿಸಬೇಕು ಇದರಿಂದ ನಮಗೆ ಬಿಡುವೇ ಸಿಗುತ್ತಿಲ್ಲ. ಅಲ್ಲದೆ ಸರಿಯಾಗಿ ನಿದ್ರೆಕೂಡ ಆಗುತ್ತಿಲ್ಲ. ಹೀಗಾಗಿ ಈ ರೀತಿಯ ಅಪಘಾತಗಳು ಸಂಭವಿಸುತ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ಇಂದು ನಡೆದ ಘಟನೆ ಬಗ್ಗೆ ತಿಳಿಸಿದ್ದೆವು. ಅವರು ಘಟಕ ಮಟ್ಟದಲ್ಲಿ ಈ ರೀತಿ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿರುವುದಾಗಿ ಸಿಬ್ಬಂದಿ ತಿಳಿಸಿದರು.
ಇಂದು ಸಂಭವಿಸಿದ ಅವಘಡದಲ್ಲಿ ಐದುಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕು. ಇದು ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಆಗಿರುವ ಘಟನೆಯೇ ಹೊರತು ಚಾಲನಾ ಸಿಬ್ಬಂದಿಯಿಂದ ಆಗಿರುವುದಲ್ಲ ಎಂದು ಸಿಬ್ಬಂದಿಗಳು ಆರೋಪ ಮಾಡಿದ್ದಾರೆ.
ಚಾಲಕ ಹಾಗೂ ಚಾಲಕ ಕಂ ನಿರ್ವಾಹಕರನ್ನು ರೂಟಿಗೆ ನಿಯೋಜಿಸಿದ್ದು ನಿರ್ವಾಹಕರಿಗೆ ಸರಿಯಾಗಿ ನಿದ್ದೆ ಆಗದೆ ಇರುವ ಕಾರಣ ಈ ಅವಘಡ ಸಂಭವಿಸಿದೆ. ಇದಕ್ಕೆ ಸಂಪೂರ್ಣ ಘಟಕದಲ್ಲಿರುವ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳು ಕಾರಣ ಎಂದು ದೂರಿದ್ದಾರೆ.
ಇದನ್ನು ವ್ಯವಸ್ಥಾಪಕ ನಿರ್ದೇಶಕರು ಪರಿಶೀಲಿಸಿ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಸೂಚನೆ ನೀಡುವ ಮೂಲಕ ಈ ತರ ಪದೇಪದೇ ಪ್ರಯಾಣಿಕರ ಮತ್ತು ನಮ್ಮ ಜೀವದ ಜತೆ ಚೆಲ್ಲಾಟ ಆಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಘಟಕದಿಂದ ತೆಗೆಯಬೇಕೆಂದು ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಡಿಸಿ ಡಿಟಿಒ ಅವರಿಗೂ ವಿಷಯ ತಿಳಿದರೂ ಕೂಡ ಇವರು ಚಾಲನಾ ಸಿಬ್ಬಂದಿಗಳ ಜೀವದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಅದಕ್ಕೆ ನಿದರ್ಶನ ಎಂಬಂತೆ ಇಂದು ಸಂಭವಿಸಿದ ಅಪಘಾತದಲ್ಲಿ ಐದು ಜನ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಹೊಣೆಯನ್ನು ಸಂಪೂರ್ಣವಾಗಿ ಅಧಿಕಾರಿಗಳೇ ಹೊರಬೇಕು ಎಂದು ಮಸ್ಕಿ ಘಟಕದ ಎಲ್ಲ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.