KSRTC: ಮಳೆಗೆ ಸೋರುತಿರುವ ಅಶ್ವಮೇಧ ಬಸ್ನಲ್ಲಿ ಕೊಡೆಹಿಡಿದು ಪ್ರಯಾಣ- ಅಧಿಕಾರಿಗಳ ಅಜ್ಞಾನಕ್ಕೆ ಹಿಡಿದ ಕನ್ನಡಿ..!?


- ಡಿಸಿಎಂ ಡಿಕೆಶಿ ಸ್ವಕ್ಷೇತ್ರ ಕನಕಪುರ ಡಿಪೋ ಬಸ್ ನ ಅವ್ಯವಸ್ಥೆಗೆ ಜನತೆ ತತ್ತರ
- ಬೆಂಗಳೂರು-ಕೊಳ್ಳೇಗಾಲ ರೂಟ್ ನಂ.103ರ ಬಸ್
- ಘಟಕ ವ್ಯವಸ್ಥಾಪಕರ ಕರ್ತವ್ಯ ಲೋಪವೇ ಕಾರಣ ಎಂದು ಪ್ರಯಾಣಿಕರು ಕಿಡಿ
- ಚಾಲನಾ ಸಿಬ್ಬಂದಿಗಳಿಗೆ ಶಿಕ್ಷೆ ಕೊಡದೆ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು
ಕೆಎಸ್ಆರ್ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಮಳೆ ಬಂದರೆ ಸಾಕು ಈ ಬಸ್ ಸೋರಲು ಶುರು ಮಾಡುತ್ತೆ. ಬಸ್ನೊಳಗೆ ನೀರು ಬೀಳುವುದರಿಂದ ಕಂಡಕ್ಟರ್, ಡ್ರೈವರ್ ಹಾಗೂ ಪ್ರಯಾಣಿಕರ ಪಾಡು ಹೇಳತೀರದು. ಮೈಮೇಲೆ ನೀರು ಬೀಳುವುದರಿಂದ ಮಳೆಯಲ್ಲಿ ನೆನೆಯಲಾಗದೆ ಬಸ್ ಒಳಗೆ ಪ್ರಯಾಣಿಕರು ಛತ್ರಿ ಹಿಡಿದುಕೊಂಡು ನಿಂತಿದ್ದಾರೆ ನೋಡಿ.
ಇದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ರಾಮನಗರ ವಿಭಾಗದ ಕನಕಪುರ ಘಟಕ ಅಶ್ವಮೇಧ ಬಸ್ಸ್ಥಿತಿ. ಇದಕ್ಕೆ ಕನಕಪುರ ಘಟಕ ಪ್ರಭಾರ ಘಟಕ ವ್ಯವಸ್ಥಾಪಕರ ಕರ್ತವ್ಯ ಲೋಪವೇ ಕಾರಣ ಎಂದು ಬಸ್ನಲ್ಲಿದ್ದ ಪ್ರಯಾಣಿಕರೊಬ್ಬರು ಕಿಡಿಕಾರಿದ್ದಾರೆ.
ಇನ್ನು ರಾಜ್ಯದ ಒಬ್ಬ ಹಾಲಿ ಉಪ ಮುಖ್ಯಮಂತ್ರಿ ಅವರ ಸ್ವ ಕ್ಷೇತ್ರ ಕನಕಪುರ ಘಟಕದಲ್ಲೇ ಈರೀತಿ ಆದರೆ, ಬೇರೆ ಘಟಕ, ನಿಗಮಗಳಲ್ಲಿ ಆಗುವುದರಲ್ಲೇನು ಅಚ್ಚರಿ ಇಲ್ಲ ಎಂದು ಬಸ್ನಲ್ಲಿದ್ದ ಜನರು ಮಳೆಯಲ್ಲಿ ನೆನೆಯುತ್ತಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಕನಕಪುರ ಡಿಪೋ ಅಶ್ವಮೇಧ ವಾಹನವಾಗಿದ್ದು ಇಂದು ಅಂದರೆ ಮೇ 2ರಂದು ಬೆಂಗಳೂರು-ಕೊಳ್ಳೇಗಾಲ ಮಾರ್ಗಾಚರಣೆ ಮಾಡುತ್ತಿದ್ದ ರೂಟ್ ನಂ.103ರ ಬಸ್ ಇದಾಗಿದ್ದು ರಾತ್ರಿ 7.45ರ ಸುಮಾರಿನಲ್ಲಿ ಬಂದ ಮಳೆಗೆ ಬಸ್ ಛಾವಣಿಯಿಂದ ನೀರು ಬೀಳುತ್ತಿತ್ತು. ಈ ಮಳೆ ನೀರಿನಿಂದಾಗಿ ಬಸ್ಸಿನಲ್ಲಿದ್ದ ಜನ ತತ್ತರಿಸಿದ್ದಾರೆ.
ಸಾರಿಗೆ ಬಸ್ ಮಾಳಿಗೆ ಮಳೆಗೆ ಸೋರುತಿದ್ದು ಇದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ. ಸಂಸ್ಥೆಯ ರಾಮನಗರ ವಿಭಾಗದ ಕನಕಪುರ ಘಟಕದ ಬಸ್ಛಾವಣಿ ಕಿತ್ತುಹೋಗಿ ಮಳೆಗೆ ಅದು ಸೋರುತ್ತಿದೆ. ಆ ಸೋರುತ್ತಿರುವ ಬಸ್ಸಿನಲ್ಲಿ ಪ್ರಯಾಣಿಕರು ಕೊಡೆ ಹಿಡಿದುಕೊಂಡು ಪ್ರಯಾಣಿಸಿದ್ದಾರೆ.

ಇದು ಘಟಕದ ಅಧಿಕಾರಿಗಳು ಮತ್ತು ಸಂಸ್ಥೆಯ ಅಧಿಕಾರಿಗಳ ನಡೆಯನ್ನು ತೋರಿಸುವಂತಿದೆ. ಬಸ್ಗಳನ್ನು ರಿಪೇರಿ ಮಾಡದೆ ಬಸ್ಗಳ ಫಿಟ್ನೆಸ್ನೋಡದೆ ಚಾಲಕರ ಕೈಗೆ ಬಸ್ಕೊಟ್ಟು ಕಳುಹಿಸುವ ಚಾಳಿಯಿಂದ ಈ ರೀತಿಯ ಅವಾಂತರಗಳು ನಡೆಯುತ್ತಿವೆ. ಇನ್ನು ಚಾಲಕರು ಇಂಥ ಬಸ್ ಬೇಡ ಎಂದು ಹೇಳಿದರೆ ಅವರಿಗೆ ಮೆಮೋ ಕೊಡುವುದು ಇಲ್ಲ ಬೇರೆ ಬಸ್ಕೊಡದೆ ಡಿಪೋನಲ್ಲೇ ಕೂರಿಸಿ ಬಳಿಕ ಗೈರು ಹಾಜರಿ ಮಾಡಿ ವೇತನ ಬರದಂತೆ ಮಾಡುವುದು.
ಇದನ್ನು ಪ್ರಶ್ನಿಸಿದರೆ ಮೇಲಧಿಕಾರಿಗಳಿಗೆ ಎದುರು ಮಾತನಾಡಿದ ಎಂದು ಹೇಳಿ ಮೆಮೋ ಕೊಟ್ಟು ಬಳಿಕ ಅಮಾನತು ಮಾಡುವುದು. ಇಲ್ಲಿ ಚಾಲಕರು ಬಸ್ಸರಿಯಿಲ್ಲ ಎಂದು ಹೇಳುವುದಕ್ಕೂ ಬಿಡದೆ ಈ ರೀತಿ ಅಧಿಕಾರಿಗಳು ದಬ್ಬಾಳಿಕ ಮಾಡುತ್ತಿರುವುದರಿಂದ ಇಂದು ಕೊಡೆ ಹಿಡಿದುಕೊಂಡು ಬಸ್ನಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ಬಂದಿದೆ.
ಇನ್ನಾದರೂ ಈ ಬಗ್ಗೆ ಸಾರಿಗೆ ಸಚಿವರು ಮತ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಗಮನ ಹರಿಸಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರಯಾಣಿಕರೆ ಒತ್ತಾಯಿಸಿದ್ದಾರೆ.
ಕಳೆದ 2024ರ ಮೇ 23ರಂದು ಮಾಡದ ತಪ್ಪಿಗೆ ಅಮಾನತಾದ ನೌಕರರು: ಇದೇರೀತಿ ಬಸ್ ಸೋರುತಿದೆ ಎಂದು ಕಳೆದ 2024ರ ಮೇ 23ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ಮಾಳಿಗೆ ಮಳೆಗೆ ಸೂರುತಿದ್ದು ಇದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ ಎಂದು ವರದಿ ಮಾಡಲಾಗಿತ್ತು. ಆದರೆ ಅದನ್ನು ಚಾಲನಾ ಸಿಬ್ಬಂದಿಗಳ ಮೇಲೆ ಹಾಕಿ ಅವರನ್ನು ಅಮಾನತು ಮಾಡಿದರು.
ವಾಸ್ತವಾಗಿ ಅಂದು ಬಸ್ನ ಮುಂದಿನ ಗ್ಲಾಸ್ನಿಂದ ನೀರು ಸೋರುತ್ತಿದ್ದು ಬಸ್ ನಿಲ್ಲಿಸಬಾರದು ನಿಲ್ಲಿಸಿದರೆ ಪ್ರಯಾಣಿಕರಿಗೆ ತೊಂದರೆ ಆಗುತ್ತದೆ ಎಂದು ಕೊಡೆ ಹಿಡಿದುಕೊಂಡು ಬಸ್ ಓಡಿಸಿದ್ದರಿಂದ ಆ ಬಸ್ ಚಾಲನಾ ಸಿಬ್ಬಂದಿಗಳನ್ನು ರೀಲ್ಸ್ ಮಾಡಿದ್ದಾರೆ ನಮ್ಮ ಬಸ್ ಸರಿಯಾಗಿದೆ ಎಂದು ತಮ್ಮ ತೂತನ್ನು ಮುಚ್ಚಿಕೊಳ್ಳಲು ಅಮಾಯಕ ನೌಕರರನ್ನು ಅಮಾನತು ಮಾಡಿ, ದಂಡ ಇತರೆ ಶಿಕ್ಷೆಗಳನ್ನು ಕೊಟ್ಟರು.
ಆದರೆ ಇಂದು ಕೆಎಸ್ಆರ್ಟಿ ಬಸ್ ಅದು ಕೂಡ ಅಶ್ವಮೇಧ ಬಸ್ ಸೋರುತ್ತಿದೆ ಎಂದರೆ ಈಗ ಯಾರಿಗೆ ಶಿಕ್ಷೆ ಕೊಡುತ್ತೀರಾ? ಅಧಿಕಾರಿಗಳಿಗೆ ಕೊಡಬೇಕು. ಇವರ ಬೇಜವಾಬ್ದಾರಿ ನಡೆಯಿಂದ ಜನರು ತೊಂದರೆ ಅನುಭವಿಸಿದ್ದಾರೆ. ಅಲ್ಲದೆ ನೆಗಡಿ, ಜ್ವರ ಬಂದು ಆರೋಗ್ಯ ಸಮಸ್ಯೆಯಾದರೆ ಏನು ಮಾಡಬೇಕು? ಹೀಗಾಗಿ ಪ್ರಮುಖವಾಗಿ ಡಿಸಿಎಂ, ಸಾರಿಗೆ ಸಚಿವರು ಹಾಗೂ ಎಂಡಿ ಅವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
Related
