ಮೈಸೂರು: ಈ ಬಾರಿ ವರುಣ ರಾಜ್ಯದಲ್ಲಿ ಕೈಕೊಟ್ಟಿರುವುದರಿಂದ ನಾಡಿನ ಅನ್ನದಾತರು ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ. ಇದಿಷ್ಟೇ ಅಲ್ಲದೆ ರಾಜ್ಯದಲ್ಲಿ ಬರ ಆವರಿಸಿರುವುದರಿಂದ ವಿಶ್ವವಿಖ್ಯಾತ ದಸರಾ ಮಹೋತ್ಸವ 2023 ಅನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರಿಸಿದೆ.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬರ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ದಸರಾವನ್ನು ಸರಳವಾಗಿ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ರೈತರು ಕೂಡ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ ಈ ಬಾರಿ ಸರಳ ಮತ್ತು ಅರ್ಥಪೂರ್ಣ ದಸರಾ ಆಚರಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ರೈತರ ಸಂಕಷ್ಟದ ಸಂದರ್ಭಕ್ಕೆ ಪೂರಕವಾಗಿ ಸರ್ಕಾರವು ಈ ಬಾರಿ ಸರಳ ದಸರಾ ಆಚರಿಸಲಿದೆ ಎಂದು ತಿಳಿಸಿದ್ದಾರೆ.
ಎಂದು ದಸರಾಗೆ ಚಾಲನೆ: ಅ.15ರಿಂದ ನವರಾತ್ರಿ: ಅ.15ರಿಂದ ಮೈಸೂರಿನಲ್ಲಿ ಶರನ್ನವರಾತ್ರಿ ಉತ್ಸವ ಪ್ರಾರಂಭವಾಗಲಿದೆ. ಅಂದು ಬೆಳಗ್ಗೆ 10.15 ರಿಂದ 10.36 ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದಸರಾಗೆ ಚಾಲನೆ ನೀಡಲಾಗುತ್ತದೆ.
ಅರಮನೆ ಪೂಜೆಗಳು: ಅ.15ರಂದು ಸಾಯಂಕಾಲ 6.30 ರಿಂದ 7.15ಶುಭಮೇಷ ಲಗ್ನದಲ್ಲಿ ಆರಂಭ. ಅ.20ರಂದು ಶುಕ್ರವಾರ : ಕಾತ್ಯಾಯಿನೀ – ಸರಸ್ವತಿ ಪೂಜೆ. (ಮೂಲ ನಕ್ಷತ್ರದಲ್ಲಿ ಸರಸ್ವತಿ ಪೂಜೆ ಪ್ರಾರಂಭ ಮಾಡಿ ಶ್ರವಣ ನಕ್ಷತ್ರದ ದಿನ ಅಂದರೆ ಅ.24ರಂದು ಮಂಗಳವಾರ ವಿಸರ್ಜನೆ) ಅ.21ರಂದು ಶನಿವಾರ : ಕಾಳರಾತ್ರಿ, ಮಹಿಷಾಸುರ ಸಂಹಾರ. ಅ.23 ಸೋಮವಾರ : ಆಯುಧ ಪೂಜೆ.
ಅ.24ರಂದು ಮಂಗಳವಾರ : ವಿಜಯದಶಮಿ. ಮಧ್ಯಾಹ್ನ 1.46 ರಿಂದ 2:08 ಮಕರ ಲಗ್ನದಲ್ಲಿ ಮುಖ್ಯಮಂತ್ರಿಯವರಿಂದ ನಂದೀ ಧ್ವಜ ಪೂಜೆ. ಮಧ್ಯಾಹ್ನ 4.40 ರಿಂದ 5.00ರ ಶುಭ ಮೀನ ಲಗ್ನದಲ್ಲಿ ಮಾನ್ಯ ಮುಖ್ಯಮಂತ್ರಿಯವರಿಂದ ಮತ್ತು ಗಣ್ಯಾತಿಗಣ್ಯರಿಂದ ಪುಷ್ಪಾರ್ಚನೆ ನಂತರ “ಜಂಬೂ ಸವಾರಿ” ಪ್ರಾರಂಭ. ಅ.26ರಂದು ಭಾನುವಾರ : ಶ್ರೀಚಾಮುಂಡೇಶ್ವರಿ ರಥೋತ್ಸವ.