ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ಹಾಸ್ಯನಟ ಬ್ಯಾಂಕ್ ಜನಾರ್ದನ್ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
74 ವರ್ಷದ ಜನಾರ್ದನ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸೋಮವಾರ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುನಲ್ಲಿ ಇರುವುದರಿಂದ ಅವನ್ನು ನೋಡಲು ಯಾರನ್ನು ಬಿಡುತ್ತಿಲ್ಲ.
ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಜನಾರ್ದನ್ ಅವರು ಈಗಾಗಲೇ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಜನಾರ್ದನ್. ಹಾಸ್ಯ ನಟರಾಗಿ ಸಾಕಷ್ಟು ಪಾತ್ರಗಳನ್ನು ಅವರು ನಿರ್ವಹಿಸಿದ್ದಾರೆ.
ಹಾಸ್ಯ ನಟನಾಗಿ ಮಿಂಚಿದ ಬ್ಯಾಂಕ್ ಜನಾರ್ದನ್: ಕನ್ನಡ ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಜನಾರ್ದನ್ ಮಿಂಚಿದ್ರು. ಉಪೇಂದ್ರ ನಿರ್ದೇಶನದ ಶ್ ಸಿನಿಮಾ, ತರ್ಲೆ ನಾನ್ ಮಗ , ಬೆಳ್ಳಿಯಪ್ಪ ಬಂಗಾರಪ್ಪ , ಗಣೇಶ ಸುಬ್ರಹ್ಮಣ್ಯ, ಗೌರವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಗಮನ ಸೆಳೆದಿದ್ದಾರೆ.
ಸೀರಿಯಲ್ಗಳಲ್ಲಿ ಬ್ಯಾಂಕ್ ಜನಾರ್ದನ್: ಸಿನಿಮಾಗಳ ಬಳಿಕ ಟಿವಿ ಸೀರಿಯಲ್ಗಳಲ್ಲಿಯೂ ನಟ ಬ್ಯಾಂಕ್ ಜನಾರ್ದನ್ ಜನರನ್ನು ನಗಿಸಿದ್ದಾರೆ. ಪಾಪ ಪಾಂಡು, ಮಾಂಗಲ್ಯ, ರೋಬೋ ಫ್ಯಾಮಿಲಿ, ಜೋಕಾಲಿ ಸೀರಿಯಲ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ಜನಾರ್ದನ್ ಅವರ ಆರೋಗ್ಯ ಸ್ಥಿರವಾಗಿದ್ದು, ಶೀಘ್ರ ಗುಣಮುಖರಾಗಲಿ ಎಂದು ನಾಡಿನ ಜನತೆ ಪ್ರಾರ್ಥಿಸುತ್ತಿದ್ದಾರೆ.