ಮೈಸೂರು: ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಪೂರಕವಾಗಿ ಸ್ಪಂದಿಸಲಿ ಎಂದು ನಗರದ 101 ಗಣಪತಿ ದೇವಸ್ಥಾನದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆಯ ಕಾರ್ಯಕರ್ತರು 101 ಪ್ರದಕ್ಷಿಣೆ ಹಾಕಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಗರಪಾಲಿಕ ಸದಸ್ಯ ಮಾವಿ ರಾಮ್ ಪ್ರಸಾದ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಅವರರ ನೇತೃತ್ವದಲ್ಲಿ ನಡೆದ ವಿನೂತನ ಪ್ರತಿಭಟನಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಿಗೆ ಬುದ್ಧಿ ಬರಲಿ ಎಂದು ವಿಘ್ನ ನಿವಾರಕ ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಾಮೂಹಿಕ ನಮಸ್ಕಾರ ಮಾಡಿದ್ದಲ್ಲದೆ, ದೇಗುಲದಲ್ಲಿ 101 ಪ್ರದಕ್ಷಿಣೆ ಮಾಡುವ ಮೂಲಕ ಜನಪ್ರತಿನಿಧಿಗಳಿಗೆ ಬುದ್ಧಿಕೊಡುವಂತೆ ದೇವರಲ್ಲಿ ಬೇಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಕಾವೇರಿಗಾಗಿ ಕರೆ ನೀಡಲಾಗಿರುವ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ರಾಜಕೀಯ ನಾಯಕರು ರಾಜಕೀಯ ಮರೆತು ನಾಡಿನ ಹಿತ ಕಾಪಾಡುವಂತೆ ಒತ್ತಾಯಗಳನ್ನು ಪ್ರತಿಭಟನಾಕಾರರು ಮಾಡಿದ್ದಾರೆ. ಈ ನಡುವೆ ಪ್ರಜ್ಞಾವಂತ ನಾಗರಿಕ ವೇದಿಕೆಯ ಕಾರ್ಯಕರ್ತರು ಈ ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಕಾವೇರಿ ಸಮಸ್ಯೆ ನಿವಾರಿಸಲಿ ಹಾಗೂ ನ್ಯಾಯಾಧಿಕರಣ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲಿ ಮತ್ತು ರಾಜ್ಯದಲ್ಲಿ ವರುಣನ ಕೃಪೆ ಬರಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಗಮನಸೆಳೆದಿದ್ದಾರೆ.
ಮಾವಿ ರಾಮ್ ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಂದ್ರಶೇಖರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್, ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ನಂದೀಶ್ ನಾಯಕ್, ಅಪೂರ್ವ ಸುರೇಶ್, ಮೋಹನ್ ಕುಮಾರ್ ಗೌಡ, ಗೌತಮ್, ಈಶ್ವರ್ ಗೌಡ, ಸದಾಶಿವ್, ಚಂದ್ರು ಇನ್ನಿತರರು ಭಾಗಿಯಾಗಿದ್ದರು.