ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಕೆಲವು ದಿನಗಳ ಹಿಂದೆಯಷ್ಟೇ ನಡೆದಿದ್ದ ಘಟನೆ ಮತ್ತೆ ಮರುಕಳಿಸಿದೆ. ಇಂದು ಹುಲಿ ದಾಳಿಗೆ ದನಗಾಹಿಯೊಬ್ಬರು ಬಲಿಯಾಗಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕಾಡಂಚಿನ ಅಯ್ಯನಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಉಡುವೆಪುರದ ನಿವಾಸಿ ಗಣೇಶ್(58) ಎಂಬುವರು ಹುಲಿ ದಾಳಿಗೆ ಬಲಿಯಾಗಿದ್ದಾರೆ.
ಗಣೇಶ್ ಅವರು ಎಂದಿನಂತೆ ದನಗಳನ್ನು ಮೇಯಿಸಲು ಅಯ್ಯನಕೆರೆ ಗ್ರಾಮದ ಪಕ್ಕಕ್ಕೆ ತೆರಳಿದ್ದರು. ಅಲ್ಲಿ ದನಗಳನ್ನು ಮೇಯಿಸುತ್ತಿದ್ದ ವೇಳೆ ಪೊದೆಯಲ್ಲಿದ್ದ ಹುಲಿ ದಾಳಿ ಮಾಡಿ ಅವರನ್ನು ಕಾಡಿನೊಳಗಡೆ ಎಳೆದೊಯ್ದು ಕೊಂದು ಹಾಕಿದೆ. ಆದರೆ ಈ ವಿಚಾರ ಯಾರಿಗೂ ತಿಳಿದಿಲ್ಲ.
ಸಂಜೆ ವೇಳೆಗೆ ಮೇಯಲು ಹೋಗಿದ್ದ ದನಗಳು ಹಿಂತಿರುಗಿದರೂ ಗಣೇಶ್ ಮಾತ್ರ ಬಂದಿರಲಿಲ್ಲ. ಇದರಿಂದ ಆತಂಕಗೊಂಡು ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕಾಡಿನೊಳಗೆ ಗಣೇಶ್ ಅವರ ರಕ್ತ ಸಿಕ್ತ ಮೃತದೇಹ ದೊರೆತಿದೆ.
ಹುಲಿ ಆಗಾಗ್ಗೆ ದಾಳಿ ಮಾಡಿ ಜನ ಮತ್ತು ಜಾನುವಾರುಗಳನ್ನು ಬಲಿಪಡೆಯುತ್ತಿದ್ದು, ಇದರಿಂದ ಕಾಡಂಚಿನ ಜನರು ಭಯಭೀತರಾಗಿದ್ದಾರೆ. ಹುಲಿಯನ್ನು ಸೆರೆಹಿಡಿದು ನೆಮ್ಮದಿಯ ಬದುಕು ಸಾಗಿಸಲು ಅನುವು ಮಾಡಿಕೊಡಿಕೊಡಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.